ನಿಟ್ಟೆ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಡಾ. ಎನ್.ವಿನಯ ಹೆಗ್ಡೆ ನಿಧನ

Dr. N. Vinaya Hegde
Dr. N. Vinaya Hegde
Published on
ಮಂಗಳೂರು: ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಸಂಸ್ಥೆ ಕರಾವಳಿಯ ನಿಟ್ಟೆ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಹಾಗೂ ನಿಟ್ಟೆ ವಿವಿ ಕುಲಪತಿ ಡಾ. ಎನ್.ವಿನಯ ಹೆಗ್ಡೆ (86) ಗುರುವಾರ ಬೆಳಗಿನ ಜಾವ ಮಂಗಳೂರಿನಲ್ಲಿ ನಿಧನರಾದರು.
ವಯೋಸಹಜ ಖಾಯಿಲೆಯಿಂದ ಮಂಗಳೂರಿನ ಶಿವಭಾಗ್‌ನಲ್ಲಿರುವ ತಮ್ಮ ಸ್ವಗೃಹದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಡಾ. ವಿನಯ ಹೆಗ್ಡೆ ಅವರ ಪಾರ್ಥೀವ ಶರೀರವನ್ನು ಮಂಗಳೂರಿನ ಶಿವಭಾಗ್ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದ್ದು, ವಿವಿಧ ಕ್ಷೇತ್ರಗಳ ಗಣ್ಯರು, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಮಂಗಳೂರು, ನಿಟ್ಟೆ ಹಾಗೂ ಬೆಂಗಳೂರು ಭಾಗಗಳಲ್ಲಿ ಶೋಕದ ವಾತಾವರಣ ಆವರಿಸಿದೆ. ಡಾ. ಎನ್.ವಿನಯ ಹೆಗ್ಡೆ ಅವರ ಪಾಥೀವ ಶರೀರ ಸಾರ್ವಜನಿಕ ದರ್ಶನಕ್ಕೆ ಮಂಗಳೂರಿನ ಶಿವಭಾಗ್‌ನಲ್ಲಿರುವ ಡಾ. ಎನ್.ವಿನಯ ಹೆಗ್ಡೆ ನಿವಾಸದಲ್ಲಿ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 3ಗಂಟೆಯವರೆಗೆ ಹಾಗೂ ಕಾರ್ಕಳದ ನಿಟ್ಟೆ ಕ್ಯಾಂಪಸ್‌ನಲ್ಲಿ ಸಂಜೆ 4.30ರಿಂದ 6 ರವರೆಗೆ ಅವಕಾಶ ಕಲ್ಪಿಸಲಾಗಿತ್ತು.

ಸಾವಿರಾರು ಜನರಿಗೆ ಉದ್ಯೋಗ

ಲೋಕಸಭಾ ಸ್ಪೀಕರ್ ಆಗಿದ್ದ ದಿವಂಗತ ಜಸ್ಟಿಸ್ ಕೆ.ಎಸ್. ಹೆಗ್ಡೆ ಅವರ ಪುತ್ರರಾದ ಡಾ. ಎನ್.ವಿನಯ ಹೆಗ್ಡೆ ಅವರು 1939ರ ಎಪ್ರಿಲ್ 3ರಂದು ಜನಿಸಿದ್ದರು. ಮಂಗಳೂರಿನ ಸೈಂಟ್ ಅಲೋಶಿಯಸ್ ಆರಂಭಿಕ ಶಿಕ್ಷಣ, ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಬಿಎಸ್ಪಿ ಪೂರೈಸಿದ್ದರು. ಕಿರಿಯ ಸೋದರ ಸಂತೋಷ್ ಹೆಗ್ಡೆ ತಂದೆಯಂತೆ ವಕೀಲ ವೃತ್ತಿ ಕಲಿತು ಮುಂದುವರಿದರೆ, ವಿನಯ ಹೆಗ್ಡೆ ಊರಿನಲ್ಲಿದ್ದೇ ಸಾಧನೆ ಮಾಡಬೇಕೆಂದು ನಿಶ್ಚಯ ಮಾಡಿದ್ದರು. ಅದರಂತೆ 1975ರಲ್ಲಿ ಲೆಮಿನಾ ಸಸ್ಪೆನ್ಸನ್ ಪ್ರೈವೇಟ್ ಲಿಮಿಟೆಡ್ ಹೆಸರಲ್ಲಿ ಕೈಗಾರಿಕಾ ಕೇಂದ್ರ ಹುಟ್ಟುಹಾಕಿದ್ದರು. ಲೆಮಿನಾ ಸಂಸ್ಥೆಯು ಆಟೋಮೊಬೈಲ್ ಬಿಡಿಭಾಗಗಳ ತಯಾರಿಕೆಯಲ್ಲಿ ಹೆಸರಾಗಿದ್ದು ಯುರೋಪ್ ಸೇರಿದಂತೆ ಹಲವು ದೇಶಗಳಿಗೆ ಬಿಡಿ ಭಾಗಗಳನ್ನು ತಯಾರಿಸಿ ರಫ್ತು ಮಾಡುತ್ತದೆ. ಇದರ ವಹಿವಾಟು ಹತ್ತು ವರ್ಷಗಳ ಹಿಂದೆಯೇ ಶತಕೋಟಿಯನ್ನು ಮೀರಿತ್ತು. ಸಂಸ್ಥೆಯಲ್ಲಿ ಸಾವಿರಾರು ಜನರಿಗೆ ಉದ್ಯೋಗವನ್ನೂ ಕೊಟ್ಟಿದ್ದಾರೆ.

ನಿಟ್ಟೆ ಎಜುಕೇಶನ್ ಟ್ರಸ್ಟ್ ಮೂಲಕ ಶಿಕ್ಷ ಕ್ರಾಂತಿ

ಡಾ. ಎನ್.ವಿನಯ ಹೆಗ್ಡೆ ತನ್ನ ತಂದೆಯವರ ಆಶಯದಂತೆ ಹುಟ್ಟೂರು ಕಾರ್ಕಳದ ನಿಟ್ಟೆ ಎನ್ನುವ ಕುಗ್ರಾಮದಲ್ಲಿ 1979ರಲ್ಲಿ ಶಾಲೆ, ಕಾಲೇಜುಗಳನ್ನು ಕಟ್ಟಿದ್ದರು. ಒಂದೆಡೆ ಕೈಗಾರಿಕೆ ಇನ್ನೊಂದೆಡೆ ಶಿಕ್ಷಣದಲ್ಲಿ ಕ್ರಾಂತಿ ಮಾಡಿದ ಅಪರೂಪದ ವ್ಯಕ್ತಿ ವಿನಯ ಹೆಗ್ಡೆ ನಿಟ್ಟೆ ಎಜುಕೇಶನ್ ಟ್ರಸ್ಟ್ ಹೆಸರಲ್ಲಿ ಈಗ ಮಂಗಳೂರು ಮತ್ತು ಬೆಂಗಳೂರಿನಲ್ಲಿ 40ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳಿವೆ. ಇದರಲ್ಲಿ ಕೆಳಹಂತದ ಶಾಲೆಯಿಂದ ಹಿಡಿದು ಉನ್ನತ ಶಿಕ್ಷಣದ ವರೆಗೂ ವಿವಿಧ ಮಾದರಿಯ ಸಂಸ್ಥೆಗಳಿವೆ. ಪಾಲಿಟೆಕ್ನಿಕ್, ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ, ಫಾರ್ಮಸಿ ಮತ್ತು ಹೊಟೇಲ್ ಮ್ಯಾನೇಜ್‌ಮೆಂಟ್ ಕಾಲೇಜುಗಳು ಹಲವಾರಿವೆ. ತಂದೆ ಕೆಎಸ್ ಹೆಗ್ಡೆ ಹೆಸರಿನಲ್ಲಿ ಆಸ್ಪತ್ರೆಗಳನ್ನು ಸ್ಥಾಪಿಸಿ ಮೆಡಿಕಲ್ ಕಾಲೇಜುಗಳ ಮೂಲಕ ಶಿಕ್ಷಣ, ಕಡಿಮೆ ವೆಚ್ಚದಲ್ಲಿ ಆರೋಗ್ಯ ಸೇವೆಗಳನ್ನು ನೀಡುತ್ತ ಬಂದಿದ್ದು ವಿನಯ ಹೆಗ್ಡೆಯವರ ಹೆಗ್ಗಳಿಕೆ. ಪ್ರಸ್ತುತ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿದ್ದರು. ವಯಸ್ಸು ಮೀರಿದ್ದರೂ ಹತ್ತು ಹಲವು ಸಂಸ್ಥೆಗಳನ್ನು ಮುನ್ನಡೆಸುತ್ತ ಲವಲವಿಕೆಯಲ್ಲಿದ್ದ ಹೆಗ್ಡೆಯವರು ಆರೋಗ್ಯ ವಿಚಾರದಲ್ಲಿ ಅಪರಿಮಿತ ಶಿಸ್ತು, ಕಾಳಜಿ ಹೊಂದಿದ್ದರು. ಶಿಕ್ಷಣ ಮತ್ತು ಸಮಾಜ ಸೇವೆಗಾಗಿ ಅವರಿಗೆ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಲಭಿಸಿದೆ.

ಹಲವು ಗಣ್ಯ ಸಂತಾಪ

ಬಿ.ವೈ.ವಿಜಯೇಂದ್ರ ಸಂತಾಪ ದೂರದೃಷ್ಟಿಯ ನಾಯಕ ಮತ್ತು ಶಿಕ್ಷಣ ತಜ್ಞ, ನಿಟ್ಟೆಯ ಎನ್. ವಿನಯ ಹೆಗ್ಡೆಯವರ ನಿಧನದಿಂದ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ದೊಡ್ಡ ನಷ್ಟವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಮ್ಮ ಸಂತಾಪ ಸೂಚನಾ ಸಂದೇಶದಲ್ಲಿ ತಿಳಿಸಿದ್ದಾರೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ವೈಯಕ್ತಿಕವಾಗಿ ತಮಗೆ ಅತ್ಯುತ್ತಮ ಸ್ನೇಹಿತರೂ ಮಾರ್ಗದರ್ಶಿಗಳೂ ಆಗಿದ್ದ ವಿನಯ ಹೆಗ್ಡೆ ಅವರ ನಿಧನದಿಂದ ಈ ಸಮಾಜವು ತನ್ನ ನಿರ್ಮಾತೃಗಳೊಬ್ಬರನ್ನು ಕಳೆದುಕೊಂಡಂತಾಗಿದೆ. ಜತೆಗೆ ಇದು ವೈಯಕ್ತಿಕವಾಗಿ ತಮಗೂ ದೊಡ್ಡ ನಷ್ಟವಾಗಿದೆ ಎಂದು ಅವರು ತಮ್ಮ ಶೋಕ ಸಂದೇಶದಲ್ಲಿ ಕಂಬನಿ ಮಿಡಿದಿದ್ದಾರೆ. ಶಿವಭಾಗ್‌ನಲ್ಲಿರುವ ಡಾ. ಎನ್.ವಿನಯ ಹೆಗ್ಡೆ ನಿವಾಸಕ್ಕೆ ಗುರುವಾರ ಎಂಎಲ್‌ಸಿ ಮಂಜುನಾಥ ಭಂಡಾರಿ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ ಆಳ್ವಾ, ಮಾಜಿ ಸಿಎಂ ವೀರಪ್ಪ ಮೊಲಿ ಸಹಿತ ಕರಾವಳಿಯ ಶಾಸಕರು, ಜನಪ್ರತಿನಿಧಿಗಳು ಮೃತ್ರ ಅಂತಿಮ ದರುಷನ ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net