

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಮುನಾಂಬ ಸೇತುವೆ ಪೂರ್ಣಗೊಂಡ ನಂತರ ಕಾಸರಗೋಡಿನಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಕುಂಡಂಗುಳಿ ತಲುಪಲು ಅತಿ ಸನಿಹ ಹಾದಿ ಇದಾಗಲಿದೆ. ಉದುಮ ಕ್ಷೇತ್ರವು ರಸ್ತೆ, ಸೇತುವೆ ನಿರ್ಮಾಣದ ಮೂಲಕ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿದೆ ಎಂದು ಲೋಕೋಪಯೋಗಿ ಮತ್ತು ಪ್ರವಾಸೋದ್ಯಮ ಸಚಿವ ಪಿ.ಎ.ಮುಹಮ್ಮದ್ ರಿಯಾಜ್ ಹೇಳಿದರು.
ಚೆಮ್ನಾಡ್, ಬೇಡಡ್ಕ ಮಧ್ಯೆ ಸಂಪರ್ಕಿಸುವ ಮುನಾಂಬ ಸೇತುವೆಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
17.70 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಲಿದೆ. ಒಟ್ಟು 198 ಮೀಟರ್ ಉದ್ದ, 11 ಮೀಟರ್ ಅಗಲ, ಎರಡೂ ಬದಿಗಳಲ್ಲಿ ಪಾದಚಾರಿ ಮಾರ್ಗ ಹೊಂದಿರುವ ಸೇತುವೆ 26 ಮೀಟರ್ ಉದ್ದದ ಐದು ಸ್ಪಾೃನ್, 10 ಮೀಟರ್ ಉದ್ದದ ಆರು ಸ್ಪಾೃನ್, ಎರಡೂ ಪಾರ್ಶ್ವದಲ್ಲಿ 80 ಮೀಟರ್ ಸಂಪರ್ಕ ರಸ್ತೆ ಹೊಂದಿದೆ. ಪ್ರಸಕ್ತ ಪಯಸ್ವಿನಿ ಮತ್ತು ಕರಿಚ್ಚೇರಿ ನದಿಗಳ ಸಂಗಮ ಸ್ಥಳವಾದ ಮುನಾಂಬದಲ್ಲಿ ಎರಡು ಪಂಚಾಯಿತಿಗಳ ಎರಡು ಗ್ರಾಮಗಳನ್ನು ಸಂಪರ್ಕಿಸುವ ತೂಗುಸೇತುವೆ ಇದ್ದು, ಮುನಾಂಬ ಸೇತುವೆ ಪೂರ್ಣಗೊಂಡ ನಂತರ ಎರಡೂ ಪ್ರದೇಶಗಳ ಜನರು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.
ಶಾಸಕ ಸಿ.ಎಚ್.ಕುಂಞಿಂಬು ಅಧ್ಯಕ್ಷತೆ ವಹಿಸಿದ್ದರು. ಲೋಕೋಪಯೋಗಿ ಇಲಾಖೆ ಉತ್ತರ ವಲಯ ಸೂಪರಿಂಟೆಂಡಿಂಗ್ ಇಂಜಿನಿಯರ್ ಇ.ಜಿ.ವಿಶ್ವಪ್ರಕಾಶ್ ವರದಿ ವಾಚಿಸಿದರು. ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಮಾಜಿ ಶಾಸಕ ಕೆ.ಕುಞಿರಾಮನ್, ಶಾಸಕ ಎಂ.ರಾಜಗೋಪಾಲನ್, ಜಿಪಂ ಉಪಾಧ್ಯಕ್ಷ ಶಾನವಾಸ್ ಪಾದೂರು, ಬೇಡಡ್ಕ ಗ್ರಾಪಂ ಅಧ್ಯಕ್ಷೆ ಎಂ.ಧನ್ಯ, ಗ್ರಾಪಂ ಸದಸ್ಯೆ ವಸಂತ ಕುಮಾರಿ, ಚೆಮ್ನಾಡು ಗ್ರಾಪಂ ಸದಸ್ಯೆ ರಮಾ ಗಂಗಾಧರನ್, ಡಿಪಿಸಿ ಸರ್ಕಾರದ ನಾಮ ನಿರ್ದೇಶಿತ ಸದಸ್ಯ ಸಿ.ರಾಮಚಂದ್ರನ್ ಮತ್ತಿತರರು ಉಪಸ್ಥಿತರಿದ್ದರು. ಇ.ಜಿ.ವಿಶ್ವಪ್ರಕಾಶ್ ಸ್ವಾಗತಿಸಿದರು. ಸೇತುವೆ ಕಣ್ಣೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಎಂ.ಸಜಿತ್ ವಂದಿಸಿದರು.