

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಉಜಿರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ 33/11 ಕೆವಿ ವಿದ್ಯುತ್ ಉಪಕೇಂದ್ರ ಕಾಮಗಾರಿಗೆ ಅರಣ್ಯ ಇಲಾಖೆ ಅನುಮತಿ ನೀಡದ ಕಾರಣ ಅಡ್ಡಿ ಉಂಟಾಗಿದೆ.
ಉಜಿರೆಯಲ್ಲಿ 33/11 ಕೆವಿ ವಿದ್ಯುತ್ ಉಪಕೇಂದ್ರ ಸ್ಥಾಪಿಸಲು 2025 ವಾ.17ರಂದು ಗುತ್ತಿಗೆ ಆದೇಶ ನೀಡಲಾಗಿತ್ತು. ಸರ್ಕಾರಿ ಜಮೀನಿನಲ್ಲಿರುವ ಕೆಲವು ಮರಗಿಡಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯ ಆಕ್ಷೇಪಣೆ ಇದ್ದು, ನ.21ರಂದು ಮಂಜೂರಾತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಇದುವರೆಗೂ ಪ್ರಕ್ರಿಯೆ ಮುಂದುವರಿಯದ ಕಾರಣ ಕಳೆದ ಮಾರ್ಚ್ನಲ್ಲಿಯೇ ಲೋಕಾರ್ಪಣೆಗೊಳ್ಳಬೇಕಿದ್ದ ವಿದ್ಯುತ್ ಉಪಕೇಂದ್ರದ ಮುಖ್ಯ ಟವರ್ ಸ್ಥಾಪನೆ ಕಾರ್ಯ ಇನ್ನೂ ಆರಂಭವಾಗಿಲ್ಲ.
ನಾಲ್ಕು ವರ್ಷಗಳಿಂದ ಉಜಿರೆಯ ನಿನ್ನಿಕಲ್ಲು ಎಂಬಲ್ಲಿ ವಿದ್ಯುತ್ ಉಪಕೇಂದ್ರ ನಿರ್ಮಿಸುವ ಬಗ್ಗೆ ಸಾಕಷ್ಟು ಪೂರ್ವಸಿದ್ಧತೆಗಳು ನಡೆದಿದ್ದವು. 0.96 ಎಕರೆ ಸ್ಥಳದಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪಿಸಲು ಜಾಗ ಗುರುತಿಸಿ, ಅದಕ್ಕೆ ಸಂಬಂಧಿಸಿದ ನಿಗದಿತ ಶುಲ್ಕ ಪಾವತಿಸಿ ಸುವಾರು ಮೂರು ವರ್ಷಗಳೇ ಕಳೆದಿವೆ. ಆದರೆ, ಈ ಜಮೀನಿನಲ್ಲಿರುವ ಮರಗಿಡಗಳು ತೆರವಾಗದ ಕಾರಣ ಕಾಮಗಾರಿ ಮುಂದುವರಿಸಲು ವಿಘ್ನ ಉಂಟಾಗಿದೆ.
ಉಜಿರೆಗೆ ಪ್ರತ್ಯೇಕ ವಿದ್ಯುತ್ ಉಪಕೇಂದ್ರ ವ್ಯವಸ್ಥೆ ಇಲ್ಲದ ಕಾರಣ ಈ ಪ್ರದೇಶದಲ್ಲಿ ವಿದ್ಯುತ್ ಹೊರೆ ಹೆಚ್ಚಿದ್ದು, ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಸಾಧ್ಯವಾಗುತ್ತಿಲ್ಲ. ಬೇಸಿಗೆಯಲ್ಲಿ ಪಂಪ್ಗಳು ಚಾಲನೆಯಾಗುವ ಕಾರಣ ಅಧಿಕ ಒತ್ತಡ ಉಂಟಾಗಿ ತಂತಿಗಳು ಕಡಿದು ಬೀಳುವುದು, ಪರಿವರ್ತಕಗಳಲ್ಲಿ ಫ್ಯೂಸ್ ಹೋಗುವುದು, ಓವರ್ಲೋಡ್, ರೋಸ್ಟರ್ ಹಾಗೂ ವಿದ್ಯುತ್ ಕಡಿತದ ಸಮಸ್ಯೆಗಳಿಂದ ಗ್ರಾಹಕರು ಕಂಗಾಲಾಗುತ್ತಿದ್ದಾರೆ.
ಸುಮಾರು 24 ಕೋಟಿ ರೂ. ಮೊತ್ತದ ಈ ಯೋಜನೆಗೆ 110 ಕೆವಿ ಕರಾಯ ವಿದ್ಯುತ್ ಉಪಕೇಂದ್ರದಿಂದ ಸಂಪರ್ಕ ಕಲ್ಪಿಸಬೇಕಿದ್ದು, 231 ಸ್ಪನ್ ಪೋಲ್ ಹಾಗೂ 211 ಟವರ್ಗಳನ್ನು ನಿರ್ಮಿಸಬೇಕಿದೆ. ಇದರ ಕಾಮಗಾರಿ ಅಂತಿಮ ಹಂತದಲ್ಲಿದೆ. ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದ್ದರೂ ಅರಣ್ಯ ಇಲಾಓ್ಢಯ ಅನುಮತಿ ದೊರೆಯದೆ ಮುಖ್ಯ ಟವರ್ ನಿರ್ಮಾಣವಾಗದ ಕಾರಣ ಸಮಸ್ಯೆ ಎದುರಾಗಿದೆ.
ಉಪಕೇಂದ್ರದ ಕಾಮಗಾರಿ ಶ್ರೀ ಮುಗಿದು ಗುಣಮಟ್ಟದ ವಿದ್ಯುತ್ ಪೂರೈಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಗ್ರಾಹಕರಿಗೆ ಕಾಮಗಾರಿ ನನೆಗುದಿಗೆ ಬಿದ್ದಿರುವುದು ನಿರಾಸೆ ತಂದಿದೆ. ಈ ಭಾಗದಲ್ಲಿ ವಿದ್ಯುತ್ ಪೂರೈಕೆಯಲ್ಲಿ ಸಾಕಷ್ಟು ಸಮಸ್ಯೆಗಳು ಕಂಡುಬರುತ್ತಿವೆ. ಇಲ್ಲಿನ ಉಪಕೇಂದ್ರ ನಿರ್ಮಾಣವಾದರೆ ಉಜಿರೆಯ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗುವುದರ ಜತೆಗೆ ಇತರ ಉಪಕೇಂದ್ರಗಳ ಮೇಲಿನ ಹೊರೆ ತಗ್ಗಲಿದೆ.
ವೇಗವಾಗಿ ಬೆಳೆಯುತ್ತಿರುವ, ಪ್ರಮುಖ ಶೈಕ್ಷಣಿಕ ಕೇಂದ್ರ ಹಾಗೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಉಜಿರೆಗೆ ವಿದ್ಯುತ್ ಉಪಕೇಂದ್ರ ಬಹುಕಾಲದ ಬೇಡಿಕೆಯಾಗಿದೆ. ಇಲ್ಲಿ ಹೆಚ್ಚಿನ ವಾಣಿಜ್ಯ ಕೇಂದ್ರಗಳಿದ್ದು, ಗುಣಮಟ್ಟದ ಹಾಗೂ ನಿರಂತರ ವಿದ್ಯುತ್ ಪೂರೈಕೆ ಅತ್ಯಗತ್ಯವಾಗಿದೆ. ಉಜಿರೆ ವ್ಯಾಪ್ತಿಯಲ್ಲಿ ಸಾಕಷ್ಟು ಕೃಷಿಕರೂ ಇದ್ದಾರೆ. ಕೃಷಿ ತೋಟಗಳಿಗೆ ಬೇಸಿಗೆ ಕಾಲದಲ್ಲಿ ನೀರು ಒದಗಿಸಲು ಗುಣಮಟ್ಟದ ವಿದ್ಯುತ್ ಅಗತ್ಯವಿದೆ.