ಪ್ರಯಾಣಿಕ ಅಸ್ವಸ್ಥ ಮಂಗಳೂರಿನಲ್ಲಿ ವಿಮಾನ ತುರ್ತು ಲ್ಯಾಂಡ್

ಮಂಗಳೂರು ಅಂ.ರಾ.ವಿಮಾನ ನಿಲ್ದಾಣ
ಮಂಗಳೂರು ಅಂ.ರಾ.ವಿಮಾನ ನಿಲ್ದಾಣ
Published on
ಮಂಗಳೂರು: ರಿಯಾದ್‌ನಿಂದ ತಿರುವನಂತಪುರಕ್ಕೆ ಚಲಿಸುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಐಎಕ್ಸ್ 522 ರಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ನೀಡುವ ಸಲುವಾಗಿ ಸೋಮವಾರ ತಡರಾತ್ರಿ ಮಂಗಳೂರು ಅಂ.ರಾ.ವಿಮಾನ ನಿಲ್ದಾಣದಲ್ಲಿ ವಿಮಾನ ತುರ್ತು ಲ್ಯಾಂಡ್ ಆಗಿದೆ.
ವಿಮಾನದಲ್ಲಿದ್ದ 30 ವರ್ಷದ ಪ್ರಯಾಣಿಕರೊಬ್ಬರು ಅಸೌಖ್ಯಕ್ಕೀಡಾಗಿದ್ದು, ಅವರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ಅವಶ್ಯವಿದ್ದುದರಿಂದ ತಡರಾತ್ರಿ ವಿಮಾನವನ್ನು ಮಂಗಳೂರು ಅಂ.ರಾ. ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು. ವಿಮಾನ ನಿಲ್ದಾಣದ ಕಾರ್ಯಾಚರಣೆ ನಿಯಂತ್ರಣ ಕೇಂದ್ರವು ಪ್ರಯಾಣಿಕರ ಆರೋಗ್ಯ ಸ್ಥಿತಿಯ ಬಗ್ಗೆ ತಕ್ಷಣವೇ ಎಚ್ಚರಿಕೆಯನ್ನು ಪಡೆಯಿತು. ತಕ್ಷಣವೇ ತನ್ನ ತುರ್ತು ಪ್ರತಿಕ್ರಿಯೆ ಪ್ರೋಟೋಕಾಲ್ ಸಕ್ರಿಯಗೊಳಿಸಿತು. ವಿಮಾನ ನಿಲ್ದಾಣದ ವೈದ್ಯಕೀಯ ತಂಡವನ್ನು ಸಜ್ಜುಗೊಳಿಸಿತು. ಇಮಿಗ್ರೇಷನ್, ಸಿಐಎಸ್‌ಎಫ್ ಮತ್ತು ಕಸ್ಟಮ್ಸ್ ಸೇರಿದಂತೆ ಪಾಲುದಾರರೊಂದಿಗೆ ಸಮನ್ವಯ ಸಾಧಿಸಿತು.
ವಿಮಾನ ನಿಲ್ದಾಣದ ವೈದ್ಯಕೀಯ ಸಿಬ್ಬಂದಿ ಅಸ್ವಸ್ಥಗೊಂಡ ವ್ಯಕ್ತಿಗೆ ಚಿಕಿತ್ಸೆ ನೀಡಿ, ಅವರ ಸ್ಥಿತಿಯನ್ನು ನಿರ್ಣಯಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ವರ್ಗಾಯಿಸಲು ವ್ಯವಸ್ಥೆ ಮಾಡಿದರು. ಜತೆಗಿದ್ದ ಸಂಬಂಧಿಕರು ಅವರೊಂದಿಗೆ ಆಸ್ಪತ್ರೆಗೆ ತೆರಳಿದರು. ವ್ಯಕ್ತಿಗೆ ವಿಮಾನದಲ್ಲೇ ಪೂರಕ ವೈದ್ಯಕೀಯ ಆರೈಕೆ ಲಭಿಸಿದ ಕಾರಣ ಅವರ ಮುಂದಿನ ಚಿಕಿತ್ಸೆಗೆ ಸಹಕಾರಿಯಾಯಿತು.
ತುರ್ತು ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ನಂತರ, ವಿಮಾನವು ಮಂಗಳವಾರ ಬೆಳಗ್ಗಿನ ಜಾವ 2:05 ಕ್ಕೆ ತಿರುವನಂತಪುರಕ್ಕೆ ಹೊರಟಿತು. ವಿಮಾನಯಾನ ಸಂಸ್ಥೆ, ವಿಮಾನ ನಿಲ್ದಾಣದ ಸಿಬ್ಬಂದಿ ಮತ್ತು ತುರ್ತು ಪ್ರತಿಕ್ರಿಯೆ ನೀಡುವವರ ನಡುವಿನ ಸರಾಗ ಸಮನ್ವಯವು ಪ್ರಯಾಣಿಕರಿಗೆ ಸಕಾಲಿಕ ವೈದ್ಯಕೀಯ ಆರೈಕೆಯನ್ನು ಒದಗಿಸಿತು ಮತ್ತು ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net