ಅಳಿವೆಬಾಗಿಲು ಮೀನುಗಾರಿಕಾ ದೋಣಿ ಮುಳುಗಡೆ ಆರು ಮೀನುಗಾರರ ರಕ್ಷಣೆ
ಮುಳುಗಡೆಯಾದ ‘ಅಯಾನ್’ ಮೀನುಗಾರಿಕಾ ಬೋಟ್.
Published on:
Copied
Follow Us
ಮಂಗಳೂರು : ಆಳ ಸಮುದ್ರ ಮೀನುಗಾರಿಕಾ ದೋಣಿಯೊಂದು ಶನಿವಾರ ಸಂಜೆ ಅಳಿವೆಬಾಗಿಲು ಸಮೀಪ ಮುಳುಗಿದೆ. ದೋಣಿಯಲ್ಲಿದ್ದ ಆರು ಮಂದಿ ಮೀನುಗಾರರನ್ನು ಸಮೀಪದಲ್ಲಿದ್ದ ಇತರ ದೋಣಿಗಳ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಬಂಟ್ವಾಳ ತಾಲೂಕಿನ ಇಬ್ರಾಹಿಂ ಮೂಸಾ ಅವರ ಮಾಲೀಕತ್ವದ ‘ಅಯಾನ್’ ಹೆಸರಿನ 15 ಮೀಟರ್ ಉದ್ದದ ಟ್ರಾಲ್ ಬೋಟ್ ಶನಿವಾರ ಸಂಜೆ ಮಂಗಳೂರು ದಕ್ಕೆಯಿಂದ ಮೀನುಗಾರಿಕೆಗೆ ತೆರಳಿತ್ತು. ದೋಣಿ ಅಳಿವೆಬಾಗಿಲನ್ನು ದಾಟುತ್ತಿದ್ದಂತೆ ಸಮುದ್ರದಲ್ಲಿ ಗಾಳಿಯ ವೇಗ ಮತ್ತು ಅಲೆಗಳ ಅಬ್ಬರ ತೀವ್ರಗೊಂಡಿದೆ. ಇದರ ಪರಿಣಾಮ ಬೋಟ್ ನಿಯಂತ್ರಣ ಕಳೆದುಕೊಂಡು ಸಮುದ್ರದಲ್ಲಿ ಮುಳುಗಡೆಯಾಗಲು ಆರಂಭಿಸಿದೆ. ಬೋಟ್ ಮುಳುಗುತ್ತಿರುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೋಟ್‌ನ ಮುಂಭಾಗ ಮಾತ್ರ ನೀರಿನ ಮೇಲೆ ತೇಲುತ್ತಾ ಮುಳುಗಡೆಯಾಗುತ್ತಿದ್ದ ಭಯಾನಕ ದೃಶ್ಯ ವಿಡಿಯೋದಲ್ಲಿದೆ.
ಸಮಯ ಪ್ರಜ್ಞೆಯಿಂದ 6 ಜೀವಗಳ ರಕ್ಷಣೆ
ಬೋಟ್ ಮುಳುಗಡೆಯಾಗುತ್ತಿದ್ದಂತೆ ಅದರಲ್ಲಿದ್ದ 6 ಮಂದಿ ಸಿಬ್ಬಂದಿ ಪ್ರಾಣಾಪಾಯಕ್ಕೆ ಸಿಲುಕಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಸಮೀಪದಲ್ಲಿದ್ದ ಇತರ ಬೋಟ್‌ಗಳ ಮೀನುಗಾರರು ಹಗ್ಗ ಹಾಗೂ ರಕ್ಷಣಾ ಸಾಧನಗಳನ್ನು ಬಳಸಿ, ಮುಳುಗುತ್ತಿದ್ದ ಬೋಟ್‌ನಲ್ಲಿದ್ದ ಎಲ್ಲಾ ಆರು ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ತಮ್ಮ ಬೋಟ್‌ಗೆ ಹಾಕಿ ರಕ್ಷಿಸಿದ್ದಾರೆ.