ಡಿಸಿ ಮನ್ನಾ ಜಾಗ ಭೂ ರಹಿತರಿಗೆ ಮೊದಲ ಆದ್ಯತೆ ಡಿಸಿ ದರ್ಶನ್ ಎಚ್.ವಿ. ಹೇಳಿಕೆ

ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ದಲಿತ ಕುಂದು ಕೊರತೆ ಸಭೆ ನಡೆಯಿತು. ಡಾ.ಅರುಣ್ ಕೆ., ಸುಧೀರ್ ಕುಮಾರ್ ರೆಡ್ಡಿ, ರಾಹುಲ್ ರತ್ನ ಪಾಂಡೆ ಮೊದಲಾದವರಿದ್ದರು.
ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ದಲಿತ ಕುಂದು ಕೊರತೆ ಸಭೆ ನಡೆಯಿತು. ಡಾ.ಅರುಣ್ ಕೆ., ಸುಧೀರ್ ಕುಮಾರ್ ರೆಡ್ಡಿ, ರಾಹುಲ್ ರತ್ನ ಪಾಂಡೆ ಮೊದಲಾದವರಿದ್ದರು.
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಭ್ಯವಿರುವ 190 ಎಕರೆ ಡಿಸಿ ಮನ್ನಾ ಭೂಮಿ ಹಾಗೂ ಅಗತ್ಯವಿರುವಲ್ಲಿ ಭೂಮಿ ಖರೀದಿ ಮಾಡಿ ನಿವೇಶನ ರಹಿತರಿಗೆ ಆದ್ಯತೆಯ ನೆಲೆಯಲ್ಲಿ ಹಂಚಿಕೆ ಮಾಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ದಲಿತ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 8,509 ಎಕ್ರೆ ಡಿಸಿ ಮನ್ನಾ ಜಾಗದಲ್ಲಿ 7,366ರಷ್ಟು ಈಗಾಗಲೇ ಮಂಜೂರು ಮಾಡಲಾಗಿದೆ. ಉಳಿಕೆ 2,222 ಅರ್ಜಿ ಜಿಲ್ಲಾ ಹಂತದಲ್ಲಿ ಬಾಕಿ ಇದೆ. ಈ ಪೈಕಿ 1,977 ಅರ್ಜಿಗಳು ಜಮೀನು ಹಾಗೂ 245 ಮಂದಿ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಬಂದಿರುವ ಅರ್ಜಿಗಳಲ್ಲಿ 1,268 ಅರ್ಜಿಗಳು ಭೂರಹಿತರದ್ದಾಗಿದೆ ಎಂದರು.
ಅಂಬೇಡ್ಕರ್ ಸರ್ಕಲ್ ಶೀಘ್ರ
ಮೂರು ದಶಕಗಳಿಂದ ಕನಸಾಗಿಯೇ ಉಳಿದ ಅಂಬೇಡ್ಕರ್ ಸರ್ಕಲ್ ನಿರ್ಮಾಣದ ಬಗ್ಗೆ ದಲಿತ ಮುಖಂಡರು ಸ್ಥಳೀಯಾಡಳಿತದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ, ಅಂಬೇಡ್ಕರ್ ಸರ್ಕಲ್ ನಿರ್ಮಾಣಕ್ಕೆ ಅನುದಾನದ ಕೊರತೆ ಇಲ್ಲ. ಸಂಚಾರಿ ವಿಭಾಗದ ಪೊಲೀಸರ ಜತೆ ಚರ್ಚೆ ನಡೆಸಿ ತಿಂಗಳೊಳಗೆ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗುವುದು. ಬಳಿಕ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದು ಭರವಸೆ ನೀಡಿದರು.
ಒತ್ತುವರಿ ಭೂಮಿ ವಶಕ್ಕೆ ಆಗ್ರಹ
ಕೆಲವೆಡೆ ಡಿಸಿ ಮನ್ನಾ ಭೂಮಿ ಒತ್ತುವರಿಯಾಗಿದ್ದು, ಅದನ್ನು ವಶಪಡಿಸಿಕೊಳ್ಳಬೇಕು ಅಥವಾ ಪರ್ಯಾಯ ಭೂಮಿ ಒದಗಿಸಲು ಕ್ರಮ ವಹಿಸಬೇಕು ಎಂದು ದಲಿತ ಮುಖಂಡರು ಸಭೆಯಲ್ಲಿ ಆಗ್ರಹಿಸಿದರು.
ದಲಿತೇತರರು ಡಿಸಿ ಮನ್ನಾ ಭೂಮಿಯನ್ನು ಅತಿಕ್ರಮಣ ಮಾಡುವಂತಿಲ್ಲ. ಅಂತಹ ಪ್ರಕರಣಗಳಿದ್ದಲ್ಲಿ ತೆರವಿಗೆ ಕ್ರಮ ವಹಿಸಲಾಗುವುದು. ಡಿಸಿ ಮನ್ನಾ ಜಾಗದಲ್ಲಿ ಸರ್ಕಾರಿ ಸಾರ್ವಜನಿಕ ಉದ್ದೇಶದ ಕಟ್ಟಡಗಳಿದ್ದರೆ ಹಾಗೂ ಸಭಾಭವನದಂತಹ ಕಟ್ಟಡಗಳ ನಿರ್ಮಾಣವಾಗಿದ್ದರೆ ಬದಲಿಗೆ ಬೇರೆಡೆ ಜಾಗ ನಿಗದಿ ಪಡಿಸಬಹುದು. ಈ ನಿಟ್ಟಿನಲ್ಲಿ ಮೂರು ಹಂತದಲ್ಲಿ ಕ್ರಮ ಆಗಬೇಕಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸುಳ್ಯ, ಬೆಳ್ತಂಗಡಿ, ಪುತ್ತೂರಿನಲ್ಲಿ ಡಿಸಿ ಮನ್ನಾ ಭೂಮಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮಕ್ಕೆ ಲೀಸ್‌ಗೆ ನೀಡಲಾಗಿದ್ದು, ಅದನ್ನು ವಾಪಾಸು ಪಡೆಯುವಂತೆ ದಲಿತ ನಾಯಕರು ಒತ್ತಾಯಿಸಿದಾಗ, ಪರಿಶೀಲನೆ ಮಾಡಿ ಕ್ರಮ ವಹಿಸುವಂತೆ ಅರಣ್ಯ ಸಂರಕ್ಷಣಾಧಿಕಾರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಡಿಸಿಆರ್‌ಇ ಅಗತ್ಯ ಸೌಲಭ್ಯಕ್ಕೆ ಆಗ್ರಹ
ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಇತ್ಯರ್ಥಕ್ಕೆ ಜಿಲ್ಲಾ ಮಟ್ಟದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್‌ಇ)ಕ್ಕೆ ಬಲ ತುಂಬಲಾಗಿದ್ದರೂ ಮೂಲಭೂತ ಸೌಕರ್ಯ ಒದಗಿಸದ ಕಾರಣ ತೊಂದರೆಯಾಗುತ್ತಿದೆ. ಇತ್ತ ಕೆಲವೆಡೆ ಪೊಲೀಸ್ ಠಾಣೆಗಳಲ್ಲಿ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಲು ಹಿಂದೇಟು ಹಾಕಲಾಗುತ್ತಿದೆ ಎಂದು ದಲಿತ ನಾಯಕರು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಎಸ್‌ಸಿ- ಎಸ್‌ಟಿಗಳಿಗೆ ನಮ್ಮಲ್ಲೇ ಮೊದಲು ಡಿಸಿಆರ್‌ಇ ಪೊಲೀಸ್ ಠಾಣೆ ಮಾಡಲಾಗಿದೆ. ಆರು ತಿಂಗಳು ಮಾತ್ರವೇ ಆಗಿದ್ದು, ಸುಧಾರಣೆ ಆಗಲು ಕೆಲ ಸಮಯ ಬೇಕಾಗುತ್ತದೆ. ಸಿಬ್ಬಂದಿ ಕೊರತೆ ಇದೆ. ಹಾಗೆಂದು ಪೊಲೀಸ್ ಠಾಣೆಗಳಲ್ಲಿ ದೌರ್ಜನ್ಯ ಪ್ರಕರಣ ದಾಖಲಿಸುವುದನ್ನು ನಿಲ್ಲಿಸಲಾಗಿಲ್ಲ. ತಮ್ಮ ವ್ಯಾಪ್ತಿಯ ಠಾಣೆಯಲ್ಲಿಯೇ ದೂರು ನೀಡಬಹುದು. ಡಿಸಿಆರ್‌ಇ ಘಟಕ ಹತ್ತಿರ ಇರುವವರು ಅಲ್ಲಿಯೂ ತಮ್ಮ ದೂರು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು ಎಂದರು.
6 ತಿಂಗಳಿನಿಂದ ಫುಡ್ ಕಿಟ್ ಬಂದಿಲ್ಲ
ದ.ಕ. ಜಿಲ್ಲೆಯ ಕೊರಗ ಹಾಗೂ ಮಲೆಕುಡಿಯ ಆದಿವಾಸಿ ಕುಟುಂಬಗಳಿಗೆ ನೀಡುತ್ತಿರುವ ಆಹಾರ ಕಿಟ್ ಕಳೆದ ಆರು ತಿಂಗಳಿನಿಂದ ಬಂದಿಲ್ಲ ಎಂದು ದಲಿತ ನಾಯಕಿ ನಂದಿನಿ ಸಭೆಯ ಗಮನ ಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ರಾಜ್ಯ ಮಟ್ಟದ ಟೆಂಡರ್ ವ್ಯವಸ್ಥೆ ಆಗಿರುವ ಕಾರಣ ವಿಳಂಬವಾಗಿದೆ. ಶೀಘ್ರದಲ್ಲೇ ವ್ಯವಸ್ಥೆ ಆಗಲಿದೆ. ಆಹಾರ ಕಿಟ್ ನೀಡಲು ವಿಳಂಬವಾಗಿರುವುದು ದುರದೃಷ್ಟಕರ. ಮುಂದೆ ಈ ರೀತಿ ಆಗದ ಹಾಗೆ ಕ್ರಮ ವಹಿಸಲಾಗುವುದು ಎಂದರು.
ಮುಖಂಡರಾದ ಪ್ರೇಮನಾಥ್ ಬಳ್ಳಾಲ್‌ಬಾಗ್, ಜಗದೀಶ್, ಚಂದ್ರಕುಮಾರ್ ಸೇರಿದಂತೆ ಹಲವು ನಾಯಕರು ವಿವಿಧ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ಎಸ್ಪಿ ಡಾ.ಅರುಣ್ ಕೆ., ಜಿ.ಪಂ. ಸಿಇಒ ವಿನಾಯಕ ಕರ್ಭಾರಿ, ಡಿಸಿಎಫ್ ರವಿಶಂಕರ್, ಡಿಸಿಪಿ ಮಿಥುನ್, ಡಿಸಿಆರ್‌ಇ ಎಸ್ಪಿ ಸೈಮನ್, ಎಸಿ ಮೀನಾಕ್ಷಿ ಆರ್ಯ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net