ಗುಡಿಸಲಿಗೆ ಬ್ಯಾನರೇ ಬಾಗಿಲು! : ಶೋಷಿತರಿಗಿಲ್ಲ ಸರ್ಕಾರಿ ಸೌಲಭ್ಯ

 ಕಜೆಕ್ಕಾರಿನಲ್ಲಿರುವ ಭಾಗಿ ಎಂಬುವರ ಗುಡಿಸಲು
ಕಜೆಕ್ಕಾರಿನಲ್ಲಿರುವ ಭಾಗಿ ಎಂಬುವರ ಗುಡಿಸಲು
Published on

ಪ್ರಮುಖ ಮುಖ್ಯಾಂಶಗಳು

  • ಆಟಕ್ಕುಂಟು ಲೆಕ್ಕಕ್ಕಿಲ್ಲದ ಸರ್ಕಾರಿ ಯೋಜನೆಗಳು
  • ಶೋಷಿತ ಸಮುದಾಯಕ್ಕಿಲ್ಲ ಮನೆ ಭಾಗ್ಯ
ಉಪ್ಪಿನಂಗಡಿ ಗ್ರಾಮದ ಕಜೆಕ್ಕಾರ್ ಎಂಬಲ್ಲಿನ ಭಾಗಿ(40) ಎಂಬುವರ ಮನೆ ಸರ್ಕಾರಿ ವ್ಯವಸ್ಥೆಯ ನೈಜತೆಯನ್ನು ಅನಾವರಣಗೊಳಿಸುವಂತಿದೆ. ಈ ಶೋಷಿತ ಸಮುದಾಯದ ಉದ್ಧಾರಕ್ಕೆಂದೇ ಸಮಾಜ ಕಲ್ಯಾಣ ಇಲಾಖೆ ಇದೆ. ಪ್ರತಿ ಬಜೆಟ್‌ನಲ್ಲಿಯೂ ಕೋಟ್ಯಂತರ ರೂ. ಹಣ ಮೀಸಲಿಸಲಾಗುತ್ತಿದೆ. ಆದರೆ ದಾಖಲೆ, ಪತ್ರಿಕೆಗಳಲ್ಲಿ ಕಾಣಸಿಗುವ ಸವಲತ್ತು ಇಂತಹ ಬಡ ಅರ್ಹ ಮಂದಿಗೆ ಲಭಿಸುತ್ತಿಲ್ಲ ಎನ್ನುವುದೇ ವಿಪರ್ಯಾಸ. ಸ್ಥಳೀಯ ಗ್ರಾಪಂನಿಂದ ಒದಗಿಸಿದ ನೀರಿನ ಟ್ಯಾಂಕ್ ಹೊರತುಪಡಿಸಿದರೆ ಈ ಮಹಿಳೆಯ ಮನೆಯಲ್ಲಿ ಹೇಳಿಕೊಳ್ಳುವ ಯಾವ ವ್ಯವಸ್ಥೆಯೂ ಇಲ್ಲ. ಮನೆಗೆ ಟಾರ್ಪಾಲು ಹೊದಿಕೆ, ಟಾರ್ಪಾಲು ಗೋಡೆ, ಬ್ಯಾನರ್ ಒಂದನ್ನು ಬಾಗಿಲು ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.

ಧರ್ಮಸ್ಥಳದಿಂದ ದೊರಕಿದ ಭೂಮಿ

ಈ ಮಹಿಳೆ ವಾಸಿಸುತ್ತಿದ್ದ ಭೂಮಿಯು ಈ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳದ ಹಕ್ಕಿನದ್ದಾಗಿದ್ದು, ಯಾವುದೇ ಸರ್ಕಾರಿ ಯೋಜನೆಗಳು ಲಭಿಸುತ್ತಿಲ್ಲ ಎಂಬ ಸೂಕ್ಷ್ಮತೆಯನ್ನು ಶಾಸಕ ಅಶೋಕ್ ಕುಮಾರ್ ರೈ ಧರ್ಮಾಧಿಕಾರಿ ಅವರಿಗೆ ಮನವರಿಕೆ ಮಾಡಿದ ಪರಿಣಾಮ ಶ್ರೀ ಕ್ಷೇತ್ರದಿಂದ ಈ ಕಾಲನಿಯ ಎಲ್ಲ ನಿವಾಸಿಗರಿಗೆ ಮನೆ ಅಡಿಸ್ಥಳವನ್ನು ನೀಡಲಾಗಿತ್ತು. ಅದರ ನೋಂದಣಿ ವೆಚ್ಚವನ್ನು ಅಶೋಕ್ ಕುಮಾರ್ ರೈ ಚಾರಿಟೆಬಲ್ ಟ್ರಸ್ಟ್ ವಹಿಸಿಕೊಂಡಿತ್ತು. ಈ ಬೆಳವಣಿಗೆ ಬಳಿಕ ಈ ಭಾಗದ ಮಂದಿಗೆ ಸರ್ಕಾರದ ಸವಲತ್ತು ಹರಿದು ಬರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆ ಹುಸಿಯಾಗಿದೆ.

ಪತ್ರದಲ್ಲಿ 3 ಲಕ್ಷ, ದೊರಕಿದ್ದು 1 ಲಕ್ಷವಷ್ಟೇ!

ಸರ್ಕಾರಿ ಭೂಮಿಯನ್ನು ಸರಾಸಗಟಾಗಿ ಒತ್ತುವರಿ ಮಾಡಿದ್ದಕ್ಕೆ ಸರ್ಕಾರ ಒಕ್ಕಲು ಎಬ್ಬಿಸಿದ್ದನ್ನೇ ನೆರೆಯ ಕೇರಳದ ಮುಖ್ಯಮಂತ್ರಿ ಟೀಕಿಸುತ್ತಾರೆ, ಪಕ್ಕದ ಪಾಕಿಸ್ಥಾನದಿಂದ ಪ್ರತಿಕ್ರಿಯೆ ಕೇಳಿ ಬರುತ್ತದೆ. ಆ ಕೂಡಲೇ ರಾಜ್ಯದ ಮುಖ್ಯಮಂತ್ರಿ ವಲಸಿಗರಿಗೆ ಮನೆಯನ್ನು ಒದಗಿಸುವ ಭರವಸೆ ನೀಡುತ್ತಾರೆ. ಈ ತ್ವರಿತ ಸ್ಪಂದನೆ ರಾಜ್ಯದ ಮೂಲ ನಿವಾಸಿಗರ ಮೇಲೆ ಯಾಕೆ ವ್ಯಕ್ತವಾಗುತ್ತಿಲ್ಲ. ಕೇವಲ ಬಜೆಟ್‌ನಲ್ಲಿ ಮಾತ್ರ ಇರುವ ಯೋಜನೆಗಳು, ಕೋಟ್ಯ್ಯಂತರ ರೂ. ಮೊತ್ತಗಳು ಇಂತಹ ಬಡವರ ಬದುಕಿಗೆ ಯಾಕೆ ಲಭಿಸುತ್ತಿಲ್ಲ. ಮಂಜೂರಾದ ಮೊತ್ತವನ್ನೂ ಒದಗಿಸದೇ ಇರುವಷ್ಟು ದಾರಿದ್ರತೆ ಯಾವ ಸರ್ಕಾರಕ್ಕೂ ಬರಬಾರದು.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಬಗೆ ಬಗೆಯ ಸವಲತ್ತುಗಳಿವೆ. ಅದು ಜನತೆಗೆ ಲಭಿಸದ ಸವಲತ್ತುಗಳಾಗಿದೆ. ಆದರೆ ಕೇರಳದವರು, ಪಾಕಿಸ್ತಾನದವರ ಬೇಡಿಕೆಗೆ ಪೂರ್ವಾಪರ ವಿಚಾರಿಸಿದೆ ವಲಸಿಗರಿಗೆ ಮನೆ ಘೋಷಿಸುವ ಉದಾರತೆ ನಮ್ಮ ಸರ್ಕಾರದ ನೇತಾರರದ್ದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net