ಸಮಸ್ಯೆ ಬಗೆಹರಿಸಲು ಇ.ವಿ. ಆಟೋರಿಕ್ಷಾ ಚಾಲಕ-ಮಾಲಕರ ಸಂಘಟನೆ ಒತ್ತಾಯ
ಮಂಗಳೂರು: ಇ.ವಿ. (ಎಲೆಕ್ಟ್ರಿಕ್ ವೆಹಿಕಲ್) ಆಟೋರಿಕ್ಷಾಗಳಿಗೆ ಪರ್ಮಿಟ್ ವಿತರಣೆ ಹಾಗೂ ವಲಯಗಳ ವಿಂಗಡಣೆ ಸಮಸ್ಯೆ ಬಗೆಹರಿಸುವಂತೆ ಇ.ವಿ. ಆಟೋರಿಕ್ಷಾ ಚಾಲಕ-ಮಾಲಕರ ಸಂಘಟನೆಯಾದ ಟೀಂ ಗ್ರೀನ್ ಸಿಟಿ ಇದರ ನಿಕಟಪೂರ್ವ ಅಧ್ಯಕ್ಷ ಪ್ರಜೇಶ್ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
2025 ಅಕ್ಟೋಬರ್ 30ರೊಳಗೆ ಬಂದಿರುವ ಎಲ್ಲಾ ಇವಿ ಆಟೋಗಳಿಗೆ ಮಂಗಳೂರು ನಗರದಲ್ಲಿ ಸಂಚರಿಸಲು ಪರ್ಮಿಟ್ ನೀಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಗ್ರಾಮಾಂತರ ವಿಳಾಸ ಹೊಂದಿರುವ ಹಾಗೂ ಮಹಿಳೆಯರ ಹೆಸರಿನಲ್ಲಿರುವ ಹಲವಾರು ವಾಹನಗಳ ಪರ್ಮಿಟ್‌ಗಳನ್ನು ಬಾಕಿ ಇರಿಸಿದ್ದು, ಇದೀಗ ಗ್ರಾಮಾಂತರ ಪರ್ಮಿಟ್ ನೀಡಿ ಕೋರ್ಟ್ ಆದೇಶ ಬರುವವರೆಗೆ ಮಂಗಳೂರು ನಗರದಲ್ಲಿ ಸಂಚರಿಸಬಹುದು ಎಂಬ ಮುದ್ರೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು.
ಸಾಲ ಮಾಡಿ, ಚಿನ್ನಾಭರಣ ಅಡಮಾನವಿಟ್ಟು ಹಲವರು ಇವಿ ಆಟೋ ಖರೀದಿ ಮಾಡಿ ಮಂಗಳೂರಿನಲ್ಲಿ ಜೀವನ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪದೇಪದೇ ನಿಯಮ ಬದಲಿಸುವ ಮೂಲಕ ಚಾಲಕರ ಬದುಕಿನೊಂದಿಗೆ ಅಧಿಕಾರಿಗಳು ಆಟವಾಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿಂದಿನ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಕ್ತ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಬಳಿಕ ಬಂದ ಜಿಲ್ಲಾಧಿಕಾರಿಯವರು ಪರ್ಮಿಟ್ ಕಡ್ಡಾಯ, ವಾಹನಗಳ ಸಂಖ್ಯೆಗೆ ಮಿತಿ ಸೇರಿದಂತೆ ಹಲವು ನಿಯಮಗಳನ್ನು ವಿಧಿಸಿದರು. ನಗರದಲ್ಲಿ ಸಂಚರಿಸಲು ತಾತ್ಕಾಲಿಕ ಪರ್ಮಿಟ್ ನೀಡಿರುವುದು ಇದೇ ಮೊದಲ ಬಾರಿಗೆ ಕಂಡುಬರುತ್ತಿದೆ. ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪರ್ಮಿಟ್ ನೀಡಲಾಗಿದೆ ಎಂಬ ದಾಖಲೆ ಸೃಷ್ಟಿಸುವ ಉದ್ದೇಶದಿಂದ ತಾತ್ಕಾಲಿಕ ಪರ್ಮಿಟ್ ನೀಡಲಾಗುತ್ತಿದೆಯೇ ಎಂಬ ಅನುಮಾನವಿದೆ ಎಂದು ಪ್ರಜೇಶ್ ತಿಳಿಸಿದರು.
ಇವಿ ಆಟೋಗಳಿಗೆ ಮಾತ್ರ ಅದರ ಮಾಲಕರೇ ಚಲಾಯಿಸಬೇಕು ಎಂಬ ನಿಯಮ ವಿಧಿಸಿರುವುದು ಏಕೆ ಎಂದು ಪ್ರಶ್ನಿಸಿದ ಅವರು, ಇದೇ ನಿಯಮ ಸಿಎನ್‌ಜಿ ಹಾಗೂ ಎಲ್‌ಪಿಜಿ ಆಟೋಗಳಿಗೆ ಯಾಕೆ ಅನ್ವಯಿಸಿಲ್ಲ ಎಂದವರು ಪ್ರಶ್ನಿಸಿದರು.
ಚಾಲಕರ ಸಿಬಿಲ್ ಸ್ಕೋರ್ ಕಡಿಮೆ ಇರುವ ಕಾರಣ ಅವರು ಪತ್ನಿಯೋ, ತಾಯಿಯೋ, ಸಹೋದರ, ಸಹೋದರಿಯರ ಹೆಸರಿನಲ್ಲಿ ಆಟೋ ಖರೀದಿಸಿದ್ದಾರೆ. ಇದೀಗ ಆಟೋ ಯಾರ ಹೆಸರಿನಲ್ಲಿದೆ ಅವರೇ ಓಡಿಸಬೇಕೆನ್ನುತ್ತಿದ್ದಾರೆ. ಇದು ಸಾಧ್ಯವೇ ಎಂದು ಪ್ರಜೇಶ್ ಅಳುಲು ತೋಡಿಕೊಂಡರು.
ಟೀಂ ಗ್ರೀನ್ ಸಿಟಿ ಅಧ್ಯಕ್ಷ ಮೋಹನ್‌ದಾಸ್, ಸಂಘಟನೆಯ ಕಿರಣ್ ಸಿ.ಕೆ., ಕ್ಲೆಮೆಂಟ್ ಡಿ'ಸೋಜಾ, ಮೈಕಲ್, ಮಹೇಂದ್ರ ಕುಮಾರ್, ಪವನ್ ಕುಮಾರ್, ರಾಮ ದೇವಡಿಗ, ರಾಧಾಕೃಷ್ಣ ಅವರು ಸುದ್ದಿಗೋಷ್ಠಿಯಲ್ಲಿದ್ದರು.