ಅವಧಿಗೆ ಮುನ್ನ ಹಲಗೆ ಜೋಡಣೆ

ಬಿಳಿಯೂರು ಅಣೆಕಟ್ಟಿನ ಗೇಟಿನಲ್ಲಿ ಸಿಲುಕಿರುವ ದಿಮ್ಮಿಗಳ ತೆರವು
ಬಿಳಿಯೂರು ಅಣೆಕಟ್ಟು.
ಬಿಳಿಯೂರು ಅಣೆಕಟ್ಟು.
Published on: 

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ

ಈ ಬಾರಿ ಮುಂಗಾರು ದುರ್ಬಲವಾದ ಕಾರಣ ಈಗಾಗಲೇ ಸೊರಗುತ್ತಿರುವ ನೇತ್ರಾವತಿ ನದಿಯಲ್ಲಿ ನೀರನ್ನು ಸಂಗ್ರಹಿಸಿಡುವ ಉದ್ದೇಶದಿಂದ ನಿಗದಿತ ಅವಧಿಗಿಂತ ಮೊದಲೇ ಬಿಳಿಯೂರು ಅಣೆಕಟ್ಟೆಗೆ ಹಲಗೆಗಳನ್ನು ಅಳವಡಿಸುವ ಸಾಧ್ಯತೆ ಇದ್ದು, ಗೇಟಿನ ಬಳಿ ಸಿಲುಕಿಕೊಂಡಿರುವ ಮರದ ದಿಮ್ಮಿಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಕಳೆದ ಮೂರು ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ಅಣೆಕಟ್ಟಿನಲ್ಲಿ 0.2 ಟಿಎಂಸಿ ನೀರು ಸಂಗ್ರಹಣೆಯಾಗುತ್ತಿದೆ. ಇದರಿಂದ ಬೆಳ್ತಂಗಡಿ ಹಾಗೂ ಪುತ್ತೂರು ತಾಲೂಕಿನ ನದಿಗಳಿಗೆ ತಾಗಿಕೊಂಡ ಗ್ರಾಮಗಳ ಅಂತರ್ಜಲ ವೃದ್ಧಿಯಾಗಿ ರೈತರ ಕೆರೆ ಹಾಗೂ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿತ್ತು.

ಈ ಬಾರಿ ಮುಂಗಾರು ಮಳೆ ಗಣನೀಯವಾಗಿ ಕುಸಿದಿದ್ದು, ನದಿ ಈಗಾಗಲೇ ಸೊರಗಿ ಹರಿಯಲಾರಂಭಿಸಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ನೀರಿನ ಕೊರತೆ ಎದುರಾಗಬಹುದೆಂಬ ಭೀತಿ ಸಾರ್ವಜನಿಕರಲ್ಲಿ ಮೂಡಿದೆ. ಈ ಮಧ್ಯೆ ಹಿಂಗಾರು ಮಳೆ ಚೆನ್ನಾಗಿ ಸುರಿದು ನದಿಯಲ್ಲಿ ನೀರಿನ ಹರಿವು ಸಹಜ ಸ್ಥಿತಿಗೆ ಬಂದರೆ ಎಂದಿನಂತೆ ನವೆಂಬರ್ ತಿಂಗಳಲ್ಲಿಯೇ ಅಣೆಕಟ್ಟೆಗೆ ಗೇಟು ಅಳವಡಿಸುವ ಸಾಧ್ಯತೆ ಇದೆ. ಆದರೂ ಮಳೆಯ ಸಾಧ್ಯತೆ ಅವಲಂಬಿಸಿ ಈ ಬಾರಿ ನಿಗದಿತ ಅವಧಿಗೆ ಮೊದಲೇ ಗೇಟ್ ಅಳವಡಿಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ನೆರೆ ನೀರಿನಲ್ಲಿ ಹರಿದು ಬಂದು ಗೇಟಿನಲ್ಲಿ ಸಿಲುಕಿಕೊಂಡ ಮರದ ದಿಮ್ಮಿಗಳ ತೆರವು ಕಾರ್ಯಾಚರಣೆ ಈಗಾಗಲೇ ನಡೆಸಲಾಗಿದೆ.

ನೆಕ್ಕಿಲಾಡಿ ಕಿಂಡಿ ಅಣೆಕಟ್ಟು ಮುಳುಗುವ ಸಾಧ್ಯತೆ: ಬಿಳಿಯೂರು ಅಣೆಕಟ್ಟಿನಲ್ಲಿ ನೀರು ನಿಲುಗಡೆಗೊಳಿಸಲು ತಕ್ಷಣಕ್ಕೆ ಮುಂದಾದರೆ ಪುತ್ತೂರು ಪುರಸಭಾ ವ್ಯಾಪ್ತಿಯ ಕುಡಿಯುವ ನೀರಿನ 34 ನೆಕ್ಕಿಲಾಡಿಯ ಕಿಂಡಿ ಅಣೆಕಟ್ಟು ಸಹಜವಾಗಿ ಮುಳುಗಡೆಯಾಗುವ ಸಾಧ್ಯತೆ ಇದೆ. ಈ ಮಧ್ಯೆ ಗುರುವಾಯನಕೆರೆ ಸಹಿತ ಬಹು ಗ್ರಾಮಗಳಿಗೆ ನೀರು ಪೂರೈಸುವ ಮೊಗ್ರು ಗ್ರಾಮದ ಮುಗೇರಡ್ಕ ಅಣೆಕಟ್ಟು ಹಾಗೂ ಬಜತ್ತೂರು ಗ್ರಾಮದ ನೀರಕಟ್ಟೆ ವಿದ್ಯುತ್ ಉತ್ಪಾದನಾ ಕೇಂದ್ರದ ಅಣೆಕಟ್ಟಿನಲ್ಲಿ ನೀರು ಸಂಗ್ರಹಿಸುವ ಪ್ರಕ್ರಿಯೆ ಆರಂಭವಾದರೆ ಬಿಳಿಯೂರಿನ ಅಣೆಕಟ್ಟೆಗೆ ನೀರಿನ ಹರಿವು ಇಳಿಮುಖವಾಗುವ ಸಾಧ್ಯತೆಯನ್ನೂ ಅಂದಾಜಿಸಲಾಗಿದೆ.

ಸೂಕ್ತ ಕ್ರಮಕ್ಕೆ ಇಲಾಖೆ ಸನ್ನದ್ಧ

ನದಿಯಲ್ಲಿ ನೀರಿನ ಹರಿಯುವಿಕೆ ಗಣನೀಯವಾಗಿ ಇಳಿದ ಕಾರಣ ಹಾಗೂ ಒಣ ವಾತಾವರಣ ಇರುವುದರಿಂದ ನೀರಿನ ಸಂಗ್ರಹದ ದೃಷ್ಟಿಯಿಂದ ಅವಧಿಗೆ ಮುನ್ನವೇ ಗೇಟ್ ಅಳವಡಿಸಲು ಮುಂದಾಗಿದ್ದೆವು. ಆದರೆ ಕೆಲ ದಿನಗಳಿಂದ ಈ ಪರಿಸರದಲ್ಲಿ ಮಳೆಯಾಗುತ್ತಿರುವುದರಿಂದ ಗೇಟು ಅಳವಡಿಕೆ ಮುಂದೂಡಿದ್ದೇವೆ. ಹಿಂಗಾರು ಮಳೆ ಚೆನ್ನಾಗಿ ಸುರಿದರೆ ಗೇಟನ್ನು ಎಂದಿನಂತೆ ನಿಗದಿತ ಅವಧಿಯಲ್ಲಿಯೇ ಹಾಕಲಾಗುವುದು. ಆದರೆ ಮಳೆ ಕಣ್ಮರೆಯಾದರೆ ಯಾವುದೇ ಸಮಯದಲ್ಲೂ ಗೇಟ್ ಹಾಕಲು ಇಲಾಖೆ ಸನ್ನದ್ಧವಾಗಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ತಾಜುದ್ದೀನ್ ತಿಳಿಸಿದ್ದಾರೆ.

ಈ ಬಾರಿಯ ಮಳೆಗಾಲದಲ್ಲಿ ಸುರಿದ ಮಳೆಯ ಪ್ರಮಾಣ ತೀರಾ ಕಡಿಮೆ. ಇದು ಮುಂಬರುವ ದಿನಗಳಲ್ಲಿ ನೀರಿನ ಅಭಾವಕ್ಕೆ ಕಾರಣವಾಗಬಹುದು. ಅದಕ್ಕಾಗಿ ಸಂಬಂಧಿತ ಇಲಾಖೆ ಜಿಲ್ಲೆಯ ಎಲ್ಲ ಕಿಂಡಿ ಅಣೆಕಟ್ಟುಗಳಿಗೆ ಸಕಾಲದಲ್ಲಿ ಹಲಗೆ ಅಳವಡಿಸಿ ನೀರು ಸಂಗ್ರಹಿಸುವ ಮೂಲಕ ಅಂತರ್ಜಲ ವೃದ್ಧಿಗೆ ಗಮನಹರಿಸಬೇಕು. ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡರೂ ನೀರಕಟ್ಟೆ ಜಲವಿದ್ಯುತ್ ಸ್ಥಾವರದ ಅಣೆಕಟ್ಟಿನಲ್ಲಿಯೂ ನೀರಿನ ಸಂಗ್ರಹಕ್ಕೆ ಗಮನಹರಿಸಬೇಕು.
ಮಹೇಂದ್ರ ವರ್ಮ ಸಾಮಾಜಿಕ ಕಾರ್ಯಕರ್ತ, ಕೃಷಿಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net