ಪ್ರಥಮ ಬೋಟ್ ಆಂಬುಲೆನ್ಸ್‌ಗೆ ಚಾಲನೆ

ಬೋಟ್ ಆಂಬುಲೆನ್ಸ್‌ನಲ್ಲಿ ಸ್ಪೀಕರ್ ಯು.ಟಿ.ಖಾದರ್, ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್, ಸಂಘದ ಅಧ್ಯಕ್ಷ ಹನೀಫ್ ಸೋಲಾರ್ ಹಾಗೂ ಗಣ್ಯರು ಸಂಚರಿಸಿದರು.
ಬೋಟ್ ಆಂಬುಲೆನ್ಸ್‌ನಲ್ಲಿ ಸ್ಪೀಕರ್ ಯು.ಟಿ.ಖಾದರ್, ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್, ಸಂಘದ ಅಧ್ಯಕ್ಷ ಹನೀಫ್ ಸೋಲಾರ್ ಹಾಗೂ ಗಣ್ಯರು ಸಂಚರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಮೀನುಗಾರರ ಸಂಘದಿಂದ ಐತಿಹಾಸಿಕ ಕಾರ್ಯಕ್ರಮ
  • ನದಿ ಮಧ್ಯೆ ಧ್ವಜಾರೋಹಣ
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಗಣರಾಜ್ಯೋತ್ಸವದ ದಿನ ಉಳ್ಳಾಲದಲ್ಲಿ ಅಪೂರ್ವ, ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ನದಿ ಮಧ್ಯದಲ್ಲೇ ಧ್ವಜಾರೋಹಣ, ಬ್ಯಾಂಡ್ ಸಂಗೀತದೊಂದಿಗೆ ಯುವಕರ ಕೋಲಾಟ ನೃತ್ಯ, ಸೈರನ್ ಮೊಳಗಿಸುತ್ತಾ ನದಿಯುದ್ದಕ್ಕೂ ಸಂಚರಿಸಿದ ಬೋಟ್ ಆಂಬುಲೆನ್ಸ್. ಇವೆಲ್ಲವೂ ಸೋಮವಾರ ಜಪ್ಪಿನಮೊಗೇರುವಿನಲ್ಲಿ ನಡೆದ ಪ್ರಥಮ ಬೋಟ್ ಆಂಬುಲೆನ್ಸ್ ಲೋಕಾರ್ಪಣೆ ಸಮಾರಂಭದಲ್ಲಿ ಕಂಡುಬಂದ ಚಿತ್ರಣ!
ಉಳ್ಳಾಲ ವಲಯ ನಾಡದೋಣಿ ಮತ್ತು ಗಿಲ್‌ನೆಟ್ ಮೀನುಗಾರರ ಸಂಘದ ವತಿಯಿಂದ ನಿರ್ಮಿಸಲಾದ ಪ್ರಥಮ ಬೋಟ್ ಆಂಬುಲೆನ್ಸ್ ಅಧಿಕೃತವಾಗಿ ಲೋಕಾರ್ಪಣೆ ಮಾಡಲಾಗಿದೆ. ಈ ಮೂಲಕ ಸಂಘದ ಪದಾಧಿಕಾರಿಗಳು ಕಳೆದ ಮೂರು ವರ್ಷಗಳಿಂದ ನಡೆಸಿದ ಪ್ರಯತ್ನ ಫಲ ನೀಡಿದೆ. ಸೋಮವಾರ ಬೆಳಗ್ಗೆ ಸ್ಪೀಕರ್ ಯು.ಟಿ.ಖಾದರ್ ಜಪ್ಪಿನಮೊಗೇರುವಿನಲ್ಲಿ ಬೋಟ್ ಆಂಬುಲೆನ್ಸ್ ಲೋಕಾರ್ಪಣೆ ಮಾಡಿದರು.
ಬಳಿಕ ಸೈರನ್ ಮೊಳಗಿಸುತ್ತಾ ತೆರಳಿದ ಬೋಟ್‌ನಲ್ಲಿ ಖಾದರ್, ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್ ನದಿಮಧ್ಯೆ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದರು. ಅಲ್ಲಿಂದ ಅದೇ ಬೋಟ್‌ನಲ್ಲಿ ಉಳ್ಳಾಲಕ್ಕೆ ತೆರಳಿದ ಗಣ್ಯರು ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕೇರಳ ಮೂಲದ ಯುವಕರ ಕೋಲಾಟ ನೃತ್ಯ ವಿಶೇಷ ಮನರಂಜನೆ ನೀಡಿತು.
ಯು.ಟಿ.ಖಾದರ್ ಮಾತನಾಡಿ, ಉಳ್ಳಾಲದ ಜನತೆ ಮತ್ತು ಮೀನುಗಾರರು ಮನಸ್ಸು ಮಾಡಿದರೆ ಯಾವುದೇ ಕಾರ್ಯ ಮಾಡಬಲ್ಲರು ಎನ್ನುವುದಕ್ಕೆ ಇದು ಸಾಕ್ಷಿ. ಈ ಕಾರ್ಯಕ್ರಮ ಉಳ್ಳಾಲದ ಘನತೆಯನ್ನು ರಾಜ್ಯಮಟ್ಟದಲ್ಲಿ ಹೆಚ್ಚಿಸಿದೆ. ಮೀನುಗಾರರು ಯೋಜನೆ ರೂಪಿಸಿ ಕಾರ್ಯಗತಗೊಳಿಸಿದ್ದು, ಈ ಮಾದರಿ ಯೋಜನೆ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರಕ್ಕೆ ಪ್ರೇರಣೆಯಾಗಲಿದೆ ಎಂದರು.

ಯೋಜನೆ ರೂಪಿಸಿದ ಬಳಿಕ ಕಾರ್ಯಗತಗೊಳಿಸಲು ಮೂರು ವರ್ಷ ಬೇಕಾಯಿತು. 16 ಲಕ್ಷ ರೂ. ಖರ್ಚು ತಗುಲಿದ್ದು ದಾನಿಗಳ ನೆರವಿನಿಂದ 10 ಲಕ್ಷ ರೂ. ಭರಿಸಲಾಗಿದ್ದರೂ ಆರು ಲಕ್ಷ ರೂ. ಸಾಲದಲ್ಲಿದ್ದೇವೆ. ನಮ್ಮ ಸಂಘದಲ್ಲಿ ಸಣ್ಣ ಮೀನುಗಾರರಿದ್ದು ಸಾಲ ಭರಿಸು ವುದು ಸುಲಭವಲ್ಲ. ಉಳ್ಳಾಲದಲ್ಲಿ ದೊಡ್ಡ ಉದ್ಯಮಿಗಳು, ಮೀನುಗಾರರಿದ್ದು ಅವರು ಸಹಕಾರ ನೀಡಿದರೆ ಇನ್ನಷ್ಟು ಯೋಜನೆ ಜಾರಿಗೊಳಿಸಲು ಸಾಧ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net