ಡಾ.ಎಂ.ಪ್ರಭಾಕರ ಜೋಶಿಗೆ ಬಳ್ಕೂರು ಯಕ್ಷ ಕುಸುಮ ಪ್ರಶಸ್ತಿ ಪ್ರದಾನ

ಡಾ.ಎಂ.ಪ್ರಭಾಕರ ಜೋಶಿಗೆ ಬಳ್ಕೂರು ಯಕ್ಷ ಕುಸುಮ ಪ್ರಶಸ್ತಿ ಪ್ರದಾನ
ಡಾ.ಎಂ.ಪ್ರಭಾಕರ ಜೋಶಿಗೆ ಬಳ್ಕೂರು ಯಕ್ಷ ಕುಸುಮ ಪ್ರಶಸ್ತಿ ಪ್ರದಾನ
Published on
ಮಂಗಳೂರು: ಕಲೆ ಇದ್ದ ಹಾಗೆ ಇದ್ರೆ ಅದು ಭಜನೆ ಆಗುತ್ತದೆ, ಪ್ರತಿಭೆ ಇಟ್ಟುಕೊಂಡು ಹೇಗೆ ಕೆಲಸ ಮಾಡಬೇಕು ಎಂಬುದಕ್ಕೆ ಈ ಕಲೆ ಸಾಕ್ಷಿ. ಕಳೆದ ಹಲವು ವರ್ಷಗಳಿಂದ ಸಾವಿರಾರು ಕಲಾವಿದರು ಯಕ್ಷರಂಗಭೂಮಿಯಲ್ಲಿ ದುಡಿಯುತ್ತಿದ್ದಾರೆ. ಜಗತ್ತಿನ ಯಾವುದೇ ಕಲೆಗೂ ಕೂಡ ಯಕ್ಷಗಾನಕ್ಕೆ ಇರುವ ಶಕ್ತಿ ಇನ್ನೂ ಯಾವ ಕಲೆಯಲ್ಲಿಯೂ ಇಲ್ಲ ಎಂದು ಹಿರಿಯ ಕಲಾವಿದ ಡಾ.ಎಂ.ಪ್ರಭಾಕರ ಜೋಶಿ ಹೇಳಿದರು.
ನಗರದ ಕೊಡಿಯಾಲ್ ಬೈಲ್ ಕುದ್ರೋಳಿ ಶ್ರೀ ಭಗವತೀ ದೇವಸ್ಥಾನದ ಕೂಟಕ್ಕಳ ಸಭಾಂಗಣದಲ್ಲಿ ಯಕ್ಷ ಕುಸುಮ ಚಾರಿಟೇಬಲ್ ಟ್ರಸ್ಟ್ ಮತ್ತು ರಂಗಸ್ಥಳ ಮಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಇವರ ಆಶ್ರಯದಲ್ಲಿ ನಡೆದ ’ಬಳ್ಕೂರು ಯಕ್ಷ ಕುಸುಮ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಸಂಸ್ಕೃತಿಯನ್ನು, ವಿಚಾರಧಾರೆಗಳನ್ನು ಉಳಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಯಕ್ಷಕುಸುಮ ಚಾರಿಟೇಬಲ್ ಟ್ರಸ್ಟ್ ನವರು ಯಕ್ಷಗಾನವನ್ನು ಕಳೆದ 4 ವರ್ಷಗಳಿಂದ ನಡೆಸುತ್ತಿರುವುದು ಬಹಳ ಹೆಮ್ಮೆಯ ವಿಷಯ ಎಂದರು.
ಹಿರಿಯ ಸಾಹಿತಿ ಜನಾರ್ದನ ಹಂದೆ ಯಕ್ಷ ಕುಸುಮ ಕವಿತೆಯನ್ನು ವಾಚಿಸಿದರು. ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಎಸ್. ಪ್ರದೀಪ ಕುಮಾರ್ ಕಲ್ಕೂರ, ಡಾ. ಎಂ. ಪ್ರಭಾಕರ ಜೋಶಿಯವರ ಯಕ್ಷಗಾನಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸಿದರು.
ಮಂಗಳೂರಿನ ಹಿರಿಯ ಲೆಕ್ಕ ಪರಿಶೋಧಕ ಎಸ್.ಎಸ್. ನಾಯಕ್, ಮಂಗಳೂರು ರಂಗಸ್ಥಳ ಸಂಸ್ಥೆಯ ಎಸ್.ಎಲ್. ನಾಯಕ್ ಮತ್ತು ದಿನೇಶ್ ಪೈ, ಮಂಗಳೂರು, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್, ಮೇಳದ ಯಜಮಾನ ರಂಜಿತ್ ಕುಮಾರ್ ವಕ್ವಾಡಿ, ಬಳ್ಕೂರು ಯಕ್ಷ ಕುಸುಮ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕರುಣಾಕರ ಬಳ್ಕೂರು ಉಪಸ್ಥಿತರಿದ್ಧರು.
ಬಡಗು ತಿಟ್ಟಿನ ಪ್ರಸಿದ್ಧ ಯಕ್ಷಗಾನ ಮೇಳವಾಗಿರುವ ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಮೆಕ್ಕೆಕಟ್ಟು ಮೇಳದವರಿಂದ ಯಕ್ಷಗಾನ ಪ್ರದರ್ಶನವಾಗಿ ’ದ್ರೌಪದಿ ಪ್ರತಾಪ ಮತ್ತು ವಿದ್ಯುಜ್ಜಿಹ್ವ ’ ಎಂಬ ಪೌರಾಣಿಕ ಕಥಾನಕ ಪ್ರದರ್ಶನಗೊಂಡಿತು.
ದ್ರೌಪದಿ ಪ್ರತಾಪ ಪ್ರಸಂಗದಲ್ಲಿ ಅತಿಥಿ ಕಲಾವಿದರಾಗಿ ಅಶ್ವಿನಿ ಕೊಂಡದಕುಳಿ ದ್ರೌಪದಿ ಪಾತ್ರವನ್ನು ನಿರ್ವಹಿಸಿದರು. ಮೆಕ್ಕೆಕಟ್ಟು ಮೇಳದ ಕಲಾವಿದರಾದ ನಾಗರಾಜ್ ಭಂಡಾರಿ, ರಾಜೇಶ್ ಭಂಡಾರಿ, ಹಳ್ಳಾಡಿ ಜಯರಾಮ್ ಶೆಟ್ಟಿ, ಗಾಂವಕ್ಕರ್ ಸೇರಿದಂತೆ ಭಾಗವತರಾದ ಸುಧೀರ್ ಭಟ್ ಪೆರ್ಡೂರು, ಸುರೇಶ್ ಭದ್ರಾಪುರ ಮೊದಲಾದವರಿಂದ ಯಕ್ಷಗಾನ ಪ್ರದರ್ಶನ ನಡೆಯಿತು.
ಕನ್ನಡ ಉಪನ್ಯಾಸಕ ಶ್ರೀಕೃಷ್ಣಭಟ್ ಸುಣ್ಣಂಗುಳಿ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net