ಎಸ್.ಡಿ.ಎಂ ಕಾಲೇಜಿನ ಎಂಸಿಜೆ ವಿಭಾಗದ ನೂತನ ಮುಖ್ಯಸ್ಥರಾಗಿ ಡಾ. ಹಂಪೇಶ್ ಕೆ.ಎಸ್. ನೇಮಕ

ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಎಂಸಿಜೆ ವಿಭಾಗದ ನೂತನ ಮುಖ್ಯಸ್ಥರಾಗಿ ಡಾ. ಹಂಪೇಶ್ ಕೆ.ಎಸ್. ಅವರು ನೇಮಕಗೊಂಡಿದ್ದು, ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ ಪಿ. ಅವರುಅಧಿಕೃತ ನೇಮಕಾತಿ ಆದೇಶ ಪತ್ರವನ್ನು ಹಸ್ತಾಂತರಿಸಿ ಶುಭ ಹಾರೈಸಿದರು.
ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಎಂಸಿಜೆ ವಿಭಾಗದ ನೂತನ ಮುಖ್ಯಸ್ಥರಾಗಿ ಡಾ. ಹಂಪೇಶ್ ಕೆ.ಎಸ್. ಅವರು ನೇಮಕಗೊಂಡಿದ್ದು, ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ ಪಿ. ಅವರುಅಧಿಕೃತ ನೇಮಕಾತಿ ಆದೇಶ ಪತ್ರವನ್ನು ಹಸ್ತಾಂತರಿಸಿ ಶುಭ ಹಾರೈಸಿದರು.
Published on

ಉಜಿರೆ: ಧರ್ಮಸ್ಥಳ ಮಂಜುನಾಥೇಶ್ವರ (ಎಸ್.ಡಿ.ಎಂ) ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ (ಎಂಸಿಜೆ) ವಿಭಾಗದ ನೂತನ ಮುಖ್ಯಸ್ಥರಾಗಿ ಸಹ ಪ್ರಾಧ್ಯಾಪಕರಾದ ಡಾ. ಹಂಪೇಶ್ ಕೆ.ಎಸ್. ಅವರು ನೇಮಕಗೊಂಡಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ ಪಿ. ಅವರು ನೂತನ ಮುಖ್ಯಸ್ಥರಿಗೆ ಅಧಿಕೃತ ನೇಮಕಾತಿ ಆದೇಶ ಪತ್ರವನ್ನು ಹಸ್ತಾಂತರಿಸಿ ಶುಭ ಹಾರೈಸಿದ್ದಾರೆ.

ಹದಿನೇಳು ವರ್ಷಗಳ ಸುದೀರ್ಘ ಸೇವಾನುಭವ

ಡಾ. ಹಂಪೇಶ್ ಅವರು ಪತ್ರಿಕೋದ್ಯಮ ಬೋಧನೆ ಮತ್ತು ಸಂಶೋಧನಾ ವಲಯದಲ್ಲಿ 17 ವರ್ಷಗಳ ಸುದೀರ್ಘ ಅನುಭವ ಹೊಂದಿದ್ದಾರೆ. 2009 ರಲ್ಲಿ ಎಸ್.ಡಿ.ಎಂ ಕಾಲೇಜಿನ ಎಂಸಿಜೆ ವಿಭಾಗಕ್ಕೆ ಸಹಾಯಕ ಪ್ರಾಧ್ಯಾಪಕರಾಗಿ ಸೇರಿದ ಇವರು, ತಮ್ಮ ದಕ್ಷ ಕಾರ್ಯವೈಖರಿಯಿಂದಾಗಿ ಮೂರು ವರ್ಷಗಳ ಹಿಂದೆ ಸಹ ಪ್ರಾಧ್ಯಾಪಕರಾಗಿ ಬಡ್ತಿ ಪಡೆದಿದ್ದರು. ಪ್ರಾಯೋಗಿಕ ತರಬೇತಿ ಮತ್ತು ಬೋಧನೆಯ ಮೂಲಕ ವಿಭಾಗವನ್ನು ಬಲಪಡಿಸುವಲ್ಲಿ ಇವರ ಪಾತ್ರ ಪ್ರಮುಖವಾದುದಾಗಿದೆ.

ವಿಭಾಗದ ರಾಷ್ಟ್ರೀಯ ಕೀರ್ತಿಗೆ ಶ್ರಮಿಸಿದ ಸಾಧಕ

ರಾಷ್ಟ್ರೀಯ ಶ್ರೇಯಾಂಕ ಸಂಸ್ಥೆಗಳಾದ 'ನಿರ್ಫ್' (NIRF) ಹಾಗೂ ಪ್ರತಿಷ್ಠಿತ 'ಇಂಡಿಯಾ ಟುಡೇ' ನಿಯತಕಾಲಿಕೆಗಳ ವಾರ್ಷಿಕ ಶ್ರೇಯಾಂಕ ಸಮೀಕ್ಷೆಗಳಲ್ಲಿ ಕಾಲೇಜಿನ ಪತ್ರಿಕೋದ್ಯಮ ವಿಭಾಗವು ದೇಶದಲ್ಲೇ ಮುಂಚೂಣಿ ಸ್ಥಾನ ಗಳಿಸಿಕೊಳ್ಳುವಲ್ಲಿ ಇವರ ಶ್ರಮ ದೊಡ್ಡದಿದೆ. 'ನ್ಯಾಕ್' (NAAC) ಮಾನ್ಯತೆ ಪ್ರಕ್ರಿಯೆ ಮತ್ತು ಆಡಳಿತಾತ್ಮಕ ಪರಿಶೀಲನೆಗಳಿಗೆ ಅಗತ್ಯವಿರುವ ಸಮಗ್ರ ವಿವರಗಳನ್ನು ರಚನಾತ್ಮಕವಾಗಿ ಸಂಯೋಜಿಸಿ, ವಿಭಾಗಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಮನ್ನಣೆ ತಂದುಕೊಡುವಲ್ಲಿ ಇವರು ಯಶಸ್ವಿಯಾಗಿದ್ದಾರೆ.

ಕೃತಿ ರಚನೆ ಮತ್ತು ಸಂಶೋಧನಾ ಸಾಧನೆ

ಅಭಿವೃದ್ಧಿ ಸಂವಹನ ಮತ್ತು ಹೊಸ ಮಾಧ್ಯಮ ತಂತ್ರಜ್ಞಾನದಲ್ಲಿ ತಜ್ಞತೆ ಹೊಂದಿರುವ ಇವರು, ಗ್ರಾಮೀಣಾಭಿವೃದ್ಧಿಯಲ್ಲಿ ಸಂವಹನದ ಪಾತ್ರದ ಕುರಿತು ನಡೆಸಿದ ಮಹಾಪ್ರಬಂಧಕ್ಕೆ 2014 ರಲ್ಲಿ ಕುವೆಂಪು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದಿದ್ದಾರೆ.

ಇವರ ಶೈಕ್ಷಣಿಕ ಸಾಧನೆಗಳು ಇಂತಿವೆ:

  • ಸಂಶೋಧನಾ ಪ್ರಬಂಧಗಳು: ಪ್ರತಿಷ್ಠಿತ ನಿಯತಕಾಲಿಕೆಗಳಲ್ಲಿ 24 ಸಂಶೋಧನಾ ಬರಹಗಳು ಪ್ರಕಟವಾಗಿವೆ.

  • ಸ್ವತಂತ್ರ ಕೃತಿಗಳು: ‘ಪತ್ರಿಕೋದ್ಯಮ: ವಿವಿಧ ಆಯಾಮ’, ‘ರೋಲ್ ಆಫ್ ಕಮ್ಯುನಿಕೇಷನ್ ಇನ್ ರೂರಲ್ ಡೆವಲಪ್‌ಮೆಂಟ್’ ಮತ್ತು ‘ಸಂಪಾದನೆ’.

  • ಸಂಪಾದಿತ ಕೃತಿಗಳು: ‘ಸೋಷಿಯಲ್ ಮೀಡಿಯಾ; ಬೂನ್ ಆರ್ ಬೇನ್’ ಮತ್ತು ‘ಸಿನಿ ಚಿಂತನೆ’.

  • ಪ್ರಬಂಧ ಮಂಡನೆ: 5 ಅಂತರರಾಷ್ಟ್ರೀಯ ಹಾಗೂ 12 ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ.

  • ಎಸ್.ಡಿ.ಎಂ ಎಂಸಿಜೆ ವಿಭಾಗದ ನೂತನ ಮುಖ್ಯಸ್ಥರಾಗಿ ಡಾ. ಹಂಪೇಶ್ ಕೆ.ಎಸ್. ನೇಮಕ

ವಿದ್ಯಾರ್ಥಿಗಳಲ್ಲಿ ಮಾಧ್ಯಮ ವೃತ್ತಿಪರತೆ ಬೆಳೆಸಲು ರಾಷ್ಟ್ರೀಯ ವಿಚಾರ ಸಂಕಿರಣಗಳು ಹಾಗೂ ತಾಂತ್ರಿಕ ಕಾರ್ಯಾಗಾರಗಳನ್ನು ನಿರಂತರವಾಗಿ ಆಯೋಜಿಸುತ್ತಾ ಬಂದಿರುವ ಡಾ. ಹಂಪೇಶ್ ಕೆ.ಎಸ್. ಅವರ ನೇಮಕಾತಿಗೆ ಕಾಲೇಜಿನ ಆಡಳಿತ ಮಂಡಳಿ, ಸಹೋದ್ಯೋಗಿಗಳು ಮತ್ತು ವಿದ್ಯಾರ್ಥಿ ವೃಂದ ಹರ್ಷ ವ್ಯಕ್ತಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net