ಪೇಟೆಗೆ ತಾಗಿಕೊಂಡಿರುವ ದೊಡ್ಮನೆ ರಸ್ತೆ ಪ್ರದೇಶದಲ್ಲಿ ದೀರ್ಘಕಾಲದಿಂದ ನೆಲೆಸಿದ್ದ ತ್ಯಾಜ್ಯದ ಕೊಂಪೆಗೆ ಕಡೆಗೂ ಮುಕ್ತಿ ಸಿಕ್ಕಿದೆ. ವಿಜಯವಾಣಿ ಪತ್ರಿಕೆಯಲ್ಲಿ ಸ್ಥಳೀಯರ ಅಳಲನ್ನು ಆಧರಿಸಿ ಪ್ರಕಟವಾದ ವಿಶೇಷ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಮೂಡುಬಿದಿರೆ ಪುರಸಭೆ ತಕ್ಷಣವೇ ಕಾರ್ಯಪ್ರವೃತ್ತವಾಗಿ ಖಾಸಗಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಎಸೆದಿದ್ದ ತ್ಯಾಜ್ಯವನ್ನು ಪೌರಕಾರ್ಮಿಕರ ಮೂಲಕ ತೆರವುಗೊಳಿಸಿದೆ.
ದೊಡ್ಮನೆ ರಸ್ತೆ ಮತ್ತು ಬಾಲಾಜಿ ಫ್ಯಾಕ್ಟರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಪ್ರದೇಶದಲ್ಲಿ ಯಥೇಚ್ಛ ಕಸ ಸುರಿಯಲಾಗುತ್ತಿತ್ತು. ವಸತಿ ಸಮುಚ್ಚಯಗಳಲ್ಲಿ ವಾಸಿಸುವ ಕೆಲವರು ಇಲ್ಲಿ ತ್ಯಾಜ್ಯವನ್ನು ತಂದು ರಾಶಿ ಹಾಕುತ್ತಿದ್ದುದರಿಂದ ಈ ಸ್ಥಳವು ಸಂಪೂರ್ಣ ಕಸದ ಕೊಂಪೆಯಾಗಿ ಪರಿವರ್ತನೆಗೊಂಡಿತ್ತು. ಇದರಿಂದಾಗಿ ಸ್ಥಳೀಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದರು. ನವೆಂಬರ್ 11ರಂದು ಈ ಕುರಿತು ವಿಜಯವಾಣಿಯಲ್ಲಿ ವಿಶೇಷ ವರದಿ ಪ್ರಕಟಗೊಂಡ ನಂತರ ಪುರಸಭೆಯ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಿ ತ್ಯಾಜ್ಯ ವಿಲೇವಾರಿ ಮಾಡಿಸಿದ್ದಾರೆ.
ಪುರಸಭೆಯು ತ್ಯಾಜ್ಯವನ್ನು ತೆರವುಗೊಳಿಸಿರುವುದಲ್ಲದೆ ಇನ್ನು ಮುಂದೆ ಈ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಭರವಸೆಯನ್ನು ಸ್ಥಳೀಯರಿಗೆ ನೀಡಿದೆ.
ಈ ಕುರಿತು ಮಾಹಿತಿ ನೀಡಿದ ಪುರಸಭೆಯ ಕಮ್ಯೂನಿಟಿ ಮೊಬಿಲೈಸರ್ ಚಂದ್ರಿಕಾ, ಮಂಗಳವಾರ ದೊಡ್ಮನೆ ರಸ್ತೆ ಪರಿಸರದಲ್ಲಿ ಪರಿಶೀಲನೆ ನಡೆಸಿ ತ್ಯಾಜ್ಯ ತೆರವುಗೊಳಿಸಿದ್ದೇವೆ. ಕಸದಲ್ಲಿ ಸಿಕ್ಕಿದ್ದ ಒಂದು ಕೊರಿಯರ್ ಕವರ್‌ನಲ್ಲಿನ ವಿಳಾಸ ಪರಿಶೀಲಿಸಿದಾಗ ಅದು ಸ್ಥಳೀಯ ವಸತಿ ಸಮುಚ್ಚಯದ ವ್ಯಕ್ತಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಆದರೆ, ಅವರು ಎರಡು ದಿನಗಳ ಹಿಂದೆಯೇ ಮನೆ ಖಾಲಿ ಮಾಡಿ ಹೋಗಿದ್ದಾರೆ ಎಂದರು. ಮುಂದೆ ಯಾರಾದರೂ ಈ ಪ್ರದೇಶದಲ್ಲಿ ಕಸ ಎಸೆದಲ್ಲಿ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಲ್ಲಿ ಪುರಸಭೆ ವಿನಂತಿಸಿಕೊಂಡಿದೆ.