ಕಾವೂರುನಲ್ಲಿ ಇನಾಯತ್ ಅಲಿ ಅಭಿಮಾನಿ ಬಳಗದಿಂದ ದೀಪಾವಳಿ ಸಂಭ್ರಮ

ದೀಪಾವಳಿ ಮನುಷ್ಯತ್ವ ಬೆಳಗಿಸುವ ಹಬ್ಬ ಪದ್ಮರಾಜ್ ಆರ್. ಪೂಜಾರಿ ಹೇಳಿಕೆ
ರಾಜ್ಯೋತ್ಸವ ಪುರಸ್ಕೃತರನ್ನು ಗೌರವಿಸಲಾಯಿತು. ಇನಾಯತ್ ಅಲಿ, ಮಮತಾ ಗಟ್ಟಿ, ಶಶಿಧರ ಹೆಗ್ಡೆ, ಪದ್ಮನಾಭ ಕೋಟ್ಯಾನ್ ಮೊದಲಾದವರಿದ್ದರು.
ರಾಜ್ಯೋತ್ಸವ ಪುರಸ್ಕೃತರನ್ನು ಗೌರವಿಸಲಾಯಿತು. ಇನಾಯತ್ ಅಲಿ, ಮಮತಾ ಗಟ್ಟಿ, ಶಶಿಧರ ಹೆಗ್ಡೆ, ಪದ್ಮನಾಭ ಕೋಟ್ಯಾನ್ ಮೊದಲಾದವರಿದ್ದರು.
Published on: 

ಮಂಗಳೂರು: ದೀಪಾವಳಿ ಎಂದರೆ ಕೇವಲ ಪಟಾಕಿ, ದೀಪಗಳ ಹಬ್ಬವಲ್ಲ, ಅದು ಮನುಷ್ಯತ್ವವನ್ನು ಬೆಳಗಿಸುವ ಹಬ್ಬ ಎಂಬುದನ್ನು ಕಾವೂರಿನಲ್ಲಿ ಇನಾಯತ್ ಅಲಿ ಅಭಿಮಾನಿ ಬಳಗ ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಪದ್ಮರಾಜ್ ಆರ್. ಹೇಳಿದರು.

ಇನಾಯತ್ ಅಲಿ ಅಭಿಮಾನಿ ಬಳಗದಿಂದ ಕಾವೂರಿನಲ್ಲಿ ಶನಿವಾರ ಆಯೋಜಿಸಲಾದ ದೀಪಾವಳಿ ಆಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದೀಪಾವಳಿಯನ್ನು ಕೇವಲ ಸಂಭ್ರಮಕ್ಕೆ ಸೀಮಿತಗೊಳಿಸದೆ, ಸಾಧಕರನ್ನು ಗುರುತಿಸುವ, ಗೌರವಿಸುವ ವೇದಿಕೆಯನ್ನಾಗಿ ಮಾಡಿದ್ದು ವಿಶೇಷ ಎಂದರು

ಧರ್ಮ ಗುರು ಫಾ.ವಿಕ್ಟರ್ ಲೋಬೋ ಮಾತನಾಡಿ, ಇನಾಯತ್ ಅಲಿ ಅವರ ಸೌಹಾರ್ದಯುತ ದೀಪಾವಳಿಯನ್ನು ಶ್ಲಾಘಿಸಿದರು. ಸರ್ವ ಧರ್ಮೀಯರಿಗೆ ದೀಪಾವಳಿ ಆಚರಣೆಯಲ್ಲಿ ಭಾಗವಹಿಸಲು ಅನುವು ಮಾಡಿಕೊಟ್ಟಿರುವುದು ನಿಜವಾದ ಸೌಹಾರ್ದತೆ. ಇನಾಯತ್ ಅಲಿ ಪ್ರತಿ ವರ್ಷ ದೀಪಾವಳಿ ಆಚರಿಸುತ್ತಿದ್ದು, ಎಲ್ಲಾ ಧರ್ಮದವರು ಇದರಲ್ಲಿ ಭಾಗವಹಿಸುತ್ತ ಬರುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು.

ಲಕ್ಷ್ಮೀಶ ಗಬ್ಬಲಡ್ಕ ಮಾತನಾಡಿ, ಇನಾಯತ್ ಅಲಿ ಅವರು ಪ್ರತಿವರ್ಷವೂ ದೀಪಾವಳಿ ಹಬ್ಬ ಆಚರಿಸುತ್ತಿರುವುದು ಸೌಹಾರ್ದತೆಯ ಜತೆಗೆ ಎಲ್ಲರನ್ನು ಸೇರಿಸಿ ಸಂಭ್ರಮಿಸುವುದು ಶ್ಲಾಘನೀಯ ಎಂದರು.

ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಪ್ರಮುಖರಾದ ಪುರುಷೋತ್ತಮ ಚಿತ್ರಾಪುರ, ಪದ್ಮನಾಭ ಕೋಟ್ಯಾನ್,ಶಶಿಧರ ಹೆಗ್ಡೆ, ರೂಪೇಶ್ ಶೆಟ್ಟಿ, ಗಿರೀಶ್ ಆಳ್ವಾ, ಶಮೀರ್ ಕಾಟಿಪಳ್ಳ ಸಹಿತ ಅನೇಕ ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳಿಗೆ ಶಾಲು, ಪೇಟ, ಸ್ಮರಣಿಕೆ ಜತೆಗೆ ಬೆಳ್ಳಿ ನಾಣ್ಯ ನೀಡಿ ಸನ್ಮಾನಿಸಲಾಯಿತು. ಇದರೊಂದಿಗೆ ಗೋ ಪೂಜೆ ನಡೆಸಲಾಯಿತು. ಆಕರ್ಷಕ ಗೂಡು ದೀಪಗಳ ಸ್ಪರ್ಧೆ ಮತ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿತು. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಗೂಡು ದೀಪಗಳನ್ನು ಕಣ್ತುಂಬಿಕೊಂಡರು. ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಹಣಕಾಸಿನ ನೆರವು ನೀಡಲಾಯಿತು. ಮಕ್ಕಳಿಗೆ ಪಟಾಕಿ ವಿತರಣೆ ಮಾಡಿ ಸಂಭ್ರಮಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯಿತು.

ರಾಜ್ಯೋತ್ಸವ ಪುರಸ್ಕೃತರನ್ನು ಗೌರವಿಸಲಾಯಿತು. ಇನಾಯತ್ ಅಲಿ, ಮಮತಾ ಗಟ್ಟಿ, ಶಶಿಧರ ಹೆಗ್ಡೆ, ಪದ್ಮನಾಭ ಕೋಟ್ಯಾನ್ ಮೊದಲಾದವರಿದ್ದರು.