

ಮೂಡುಬಿದಿರೆ: ತೆಂಕಮಿಜಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆಂಕಮಿಜಾರು ಹಾಗೂ ಬಡಗಮಿಜಾರು ಗ್ರಾಮಗಳ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ವಿಕಲಾಂಗರ ಕುಂದುಕೊರತೆ ಸಭೆ ಹಾಗೂ ವಿವಿಧ ಯೋಜನೆಗಳ ಸವಲತ್ತು ವಿತರಣಾ ಕಾರ್ಯಕ್ರಮವು ಶನಿವಾರ ಅಶ್ವತ್ಥಪುರ ಸಂತೆಕಟ್ಟೆಯ ವಿವಿಧೋದ್ದೇಶ ಸಭಾಂಗಣದಲ್ಲಿ ನಡೆಯಿತು.
ಶಾಸಕ ಉಮಾನಾಥ ಎ.ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿ, ಫಲಾನುಭವಿಗಳಿಗೆ ಸವಲತ್ತು ವಿತರಿಸಿದರು. ತೆಂಕಮಿಜಾರು ಗ್ರಾಪಂ ಅಧ್ಯಕ್ಷೆ ಶಾಲಿನಿ ಕೆ.ಸಾಲ್ಯಾನ್ ಅಧ್ಯಕ್ಷತೆ ವಹಿಸಿ ಮಾಹಿತಿ ನೀಡಿದರು.
ಅಂಗವಿಕಲರ ಶ್ರೇಯೋಭಿವೃದ್ಧಿ ನಿಧಿಯಿಂದ 65 ಫಲಾನುಭವಿಗಳಿಗೆ ತಲಾ ಎರಡು ಸಾವಿರ ರೂ.ದಂತೆ ಒಟ್ಟು 1.30 ಲಕ್ಷ ರೂ. ವಿತರಿಸಲಾಯಿತು. 1 ಲಕ್ಷ ರೂ. ವೆಚ್ಚದಲ್ಲಿ 23 ಫಲಾನುಭವಿಗಳಿಗೆ ಸಿಂಟೆಕ್ಸ್ ಟ್ಯಾಂಕ್ ವಿತರಿಸಲಾಯಿತು. 2 ಲಕ್ಷ ರೂ. ವೆಚ್ಚದಲ್ಲಿ 69 ವಿದ್ಯಾರ್ಥಿಗಳಿಗೆ ಸ್ಟಡಿ ಟೇಬಲ್ ವಿತರಿಸಲಾಯಿತು. 6 ಮಂದಿಗೆ ವೈದ್ಯಕೀಯ ವೆಚ್ಚಕ್ಕಾಗಿ ತಲಾ 5 ಸಾವಿರ ರೂ.ದಂತೆ 30 ಸಾವಿರ ರೂ.ನ ಚೆಕ್ ವಿತರಿಸಲಾಯಿತು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾದಸ್ವರ ವಾದಕ ದಿನೇಶ್ ಅವರನ್ನು ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು. ನಿವೃತ್ತಿ ಹೊಂದಿದ ಆಶಾ ಕಾರ್ಯಕರ್ತೆಯರಾದ ಯಶೋದಾ ಮತ್ತು ಬೇಬಿ ಹಾಗೂ ಅಂಗನವಾಡಿ ಕಾರ್ಯಕರ್ತೆ ಕಮಲ ಅವರನ್ನು ಗೌರವಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಲ್ಲಮುಂಡ್ಕೂರು ವಲಯದ ಮೇಲ್ವಿಚಾರಕಿ ಶುಭಾ, ಗ್ರಾಮ ಆಡಳಿತಾಧಿಕಾರಿಗಳಾದ ತೆಂಕಮಿಜಾರಿನ ಸಂತೋಷ್ ಮತ್ತು ಬಡಗಮಿಜಾರಿನ ಅರ್ಜುನ್ ಇಲಾಖಾ ಮಾಹಿತಿ ನೀಡಿದರು. ಗ್ರಾಪಂ ಸದಸ್ಯರಾದ ರುಕ್ಮಿಣಿ, ಹರಿಪ್ರಸಾದ್ ಶೆಟ್ಟಿ, ಸಮಿತಾ, ನಮಿತಾ, ದಿನೇಶ್ ಎಲ್, ವಿದ್ಯಾನಂದ ಶೆಟ್ಟಿ, ಮಹೇಶ್, ನಿಶಾ, ಯೋಗಿನಿ, ಲಕ್ಷ್ಮೀ ಗೀತಾ ಉಪಸ್ಥಿತರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರೋಹಿಣಿ ಬಿ. ಸ್ವಾಗತಿಸಿದರು. ಕಾರ್ಯದರ್ಶಿ ರಮೇಶ್ ಬಂಗೇರ ಫಲಾನುಭವಿಗಳ ವಿವರ ನೀಡಿದರು. ರಾಕೇಶ್ ಭಟ್ ವಂದಿಸಿದರು.