

ಕಡಬ: ರೈತರು ದೇಶದ ಬೆನ್ನೆಲುಬು ಎಂದು ಭಾಷಣ ಮಾಡುತ್ತಾರೆ. ಆದರೆ ಪ್ರತಿಯೊಂದು ವಿಚಾರದಲ್ಲಿಯೂ ರೈತರನ್ನೇ ಬಲಿಯಾಗಿಸುತ್ತಾರೆ. ಆದರೆ ರೈತರ ಬದುಕನ್ನು ನಾಶ ಮಾಡುವ ನಿಯಮ ರೂಪಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಜನತೆಯ ಜೀವನೋಪಾಯಕ್ಕೆ, ವಾಸ್ತವವಾಗಿರುವ ವ್ಯವಸ್ಥೆಗಳಿಗೆ ಧಕ್ಕೆ ತರುವ ಕಸ್ತೂರಿ ರಂಗನ್ ವರದಿ ಜಾರಿಯಾಗಬಾರದು ಎಂದು ಮಲೆನಾಡು ಜನಹಿತರಕ್ಷಣಾ ವೇದಿಕೆ ಸಂಚಾಲಕ ಧನಂಜಯ ಕೊಡಂಗೆ ಹೇಳಿದರು.
ಕುಟ್ರುಪ್ಪಾಡಿ ಗ್ರಾಪಂ ವ್ಯಾಪ್ತಿಯ ಬಲ್ಯ ಗ್ರಾಮದಲ್ಲಿ ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿ ಹೊಸ್ಮಠ ಗೌಡ ಸಭಾಭವನದಲ್ಲಿ ನಡೆದ ವಿಶೇಷ ಗ್ರಾಮಸಭೆಯಲ್ಲಿ ಮಾತನಾಡಿದರು.
ಪಂಚಾಯಿತಿ ಆಡಳಿತಾಧಿಕಾರಿ ಡಾ.ಅಜಿತ್ ಎಂ.ಸಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಸಭೆ ಮೂಲಕ ಜನಾಭಿಪ್ರಾಯ ಸಂಗ್ರಹಿಸಿ ಅದನ್ನು ಸರ್ಕಾರಕ್ಕೆ ಮುಟ್ಟಿಸುವ ಕೆಲಸ ಮಾಡುತ್ತೇವೆ. ತಾಂತ್ರಿಕವಾದ ಅಂಶಗಳು ಹಾಗೂ ಸ್ಪಷ್ಟ ದಾಖಲೆ ಮುಂದಿಟ್ಟುಕೊಂಡು ವಿರೋಧಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಇನ್ನಷ್ಟು ಸ್ಪಷ್ಟ ಹಾಗೂ ನಿಖರ ದಾಖಲೆ ಪ್ರಸ್ತುತಪಡಿಸಬೇಕು. ನಮ್ಮ ವರದಿ ತಯಾರಿಸುವ ಮೊದಲು ನೀಡುವಂತೆ ಮನವಿ ಮಾಡಿದರು.
ಕುಟ್ರುಪ್ಪಾಡಿ ಗ್ರಾಪಂ ಮಾಜಿ ಅಧ್ಯಕ್ಷ ದೇವಯ್ಯ ಪನ್ಯಾಡಿ, ಡಾ.ಸುರೇಶ್ ಕುಮಾರ್, ಪಂಜವಲಯ ಅರಣ್ಯಾಧಿಕಾರಿ ಮಂಜುನಾಥ್, ಗ್ರಾಮಾಡಳಿತ ಅಧಿಕಾರಿ ರಮೇಶ್, ಶ್ರೀಕೃಷ್ಣ ಎಂ.ಆರ್., ವಿಕ್ಟರ್ ಮಾರ್ಟೀಸ್, ಕೃಷ್ಣಪ್ಪ ದೇವಾಡಿಗ ಸನಿಲ, ಮಲೆನಾಡು ಜನಹಿತರಕ್ಷಣಾ ವೇದಿಕೆ ಬಲ್ಯ ಗ್ರಾಮದ ಅಧ್ಯಕ್ಷ ಯೋಗೇಂದ್ರ ಬನಾರಿ, ಕಿರಣ್ ಪುತ್ತಿಲ, ಚಂದ್ರಹಾಸ, ಶಿವಪ್ರಸಾದ್ ಪುತ್ತಿಲ, ಉಮೇಶ್ ಬಂಗೇರ, ಸತೀಶ್ಚಂದ್ರ, ಗಣೇಶ್ ಭಟ್, ಅಚ್ಚುತ ಗೌಡ, ರಾಮಚಂದ್ರ ಗೌಡ, ಸಜನಿ ಇದ್ದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಗೋಪಿನಾಥ್ ಪಿ. ಸ್ವಾಗತಿಸಿದರು. ಪಂಚಾಯಿತಿ ಸಿಬ್ಬಂದಿ ಜಿತೇಶ್ ವಂದಿಸಿದರು. ಉಮೇಶ್ ನಿರೂಪಿಸಿದರು.