ಲಘು ವಾಹನ ಸಂಚಾರಕ್ಕೆ ಸಂಕಷ್ಟ

ಪೆರ್ಲ-ಪೂವನಡ್ಕ ತನಕ ರಸ್ತೆ ಅಗೆತ ಮರುಡಾಂಬರೀಕರಣ ಕಾಮಗಾರಿ
 ಪೆರ್ಲ-ಪೂವನಡ್ಕ ರಸ್ತೆ ಹಳೇ ಡಾಂಬರನ್ನು ಸಂಪೂರ್ಣ ಕ್ರಶ್ ಮಾಡಲಾಗಿರುವುದು.
ಪೆರ್ಲ-ಪೂವನಡ್ಕ ರಸ್ತೆ ಹಳೇ ಡಾಂಬರನ್ನು ಸಂಪೂರ್ಣ ಕ್ರಶ್ ಮಾಡಲಾಗಿರುವುದು.
Published on: 

ಪುರುಷೋತ್ತಮ ಪೆರ್ಲ

ಸಂಪೂರ್ಣ ಹದಗೆಟ್ಟಿದ್ದ ಎಣ್ಮಕಜೆ ಪಂಚಾಯಿತಿಯ ಪೆರ್ಲ-ಪೂವನಡ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆದರೆ ಕಾಮಗಾರಿಯಿಂದಾಗಿ ಲಘು ವಾಹನಗಳ ಸಂಚಾರಕ್ಕೆ ಭಾರಿ ಸಮಸ್ಯೆ ಎದುರಾಗಿದೆ.

ಈ ಹಿಂದೆ ಡಾಂಬರೀಕರಣಗೊಂಡ ರಸ್ತೆಯನ್ನು ಸಂಪೂರ್ಣ ಕ್ರಶ್ ಮಾಡಿ ಅದರ ಮೇಲಿಂದ ರೋಲರ್ ಹಾಯಿಸಿ ಕಾಂಕ್ರೀಟ್ ಮಿಶ್ರಿತ ಜಲ್ಲಿ ಹರಡಿ ಮತ್ತೆ ರೋಲರ್ ಹಾಯಿಸಿದ ನಂತರ ಮರುಡಾಂಬರೀಕರಣ ಕಾರ್ಯ ನಡೆಯಲಿದೆ. ಪೆರ್ಲದಿಂದ ಆರೂವರೆ ಕಿ.ಮೀ. ದೂರದ ಪೂವನಡ್ಕವರೆಗೆ ರಸ್ತೆ ಸಂಪೂರ್ಣ ಅಭಿವೃದ್ಧಿಗೊಳ್ಳಲಿದೆ. ಕಾಮಗಾರಿಗಾಗಿ ಪೆರ್ಲದಿಂದ ಪೂವನಡ್ಕವರೆಗೂ ರಸ್ತೆಯನ್ನು ಸಂಪೂರ್ಣ ಅಗೆದು ಹಾಕಿರುವುದರಿಂದ ದ್ವಿಚಕ್ರವಾಹನ, ಆಟೋರಿಕ್ಷಾಗಳ ಸಂಚಾರಕ್ಕೆ ತೊಡಕಾಗಿದೆ. ಕೆಲವೆಡೆ ದ್ವಿಚಕ್ರವಾಹನಗಳು ಜಲ್ಲಿಕಲ್ಲುಗಳ ಮಧ್ಯೆ ಸಿಲುಕಿ ಮುಂದಕ್ಕೆ ಚಲಿಸಲಾಗದ ಸ್ಥಿತಿ ನಿರ್ಮಾಣವಾಗುತ್ತಿದೆ. ಕೆಲವರು ದ್ವಿಚಕ್ರ ವಾಹನಗಳಿಂದ ಬಿದ್ದು ಗಾಯಗೊಳ್ಳುವುದು ಸಾಮಾನ್ಯವಾಗಿದೆ.

ಕಾಮಗಾರಿ ತ್ವರಿತಗೊಳಿಸಲು ಆಗ್ರಹ: ಪೆರ್ಲ-ಪೂವನಡ್ಕ ರಸ್ತೆ ಕಾಮಗಾರಿ ತ್ವರಿತಗೊಳಿಸಿ ಶೀಘ್ರ ಮುಗಿಸಬೇಕೆಂದು ಇಲ್ಲಿನ ಜನತೆ ಆಗ್ರಹಿಸಿದ್ದಾರೆ. ರಸ್ತೆ ಅಭಿವೃದ್ಧಿ ಹಿನ್ನೆಲೆಯಲ್ಲಿ ಹಳೇ ಡಾಂಬರನ್ನು ಸಂಪೂರ್ಣ ಅಗೆದು ಹಾಕಿರುವುದರಿಂದ ಲಘು ವಾಹನಗಳ ಸಂಚಾರ ತ್ರಾಸದಾಯಕವೆನಿಸಿದೆ. ಪೆರ್ಲ-ಪೂವನಡ್ಕ ಸಂಪರ್ಕ ರಸ್ತೆಯ ನಿತ್ಯವೂ ಜನ-ವಾಹನ ದಟ್ಟಣೆಯಿಂದ ಕೂಡಿರುತ್ತದೆ. ಕಾಮಗಾರಿ ನೆಪದಲ್ಲಿ ರಸ್ತೆ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸುವಂತೆಯೂ ಇಲ್ಲ. ಒಂದು ಪಾರ್ಶ್ವದಲ್ಲಿ ಡಾಂಬರೀಕರಣ ನಡೆಸಿ, ಇನ್ನೊಂದೆಡೆಯಿಂದ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡುವುದೂ ಕಷ್ಟಸಾಧ್ಯ. ಆದ್ದರಿಂದ ಒಂದೆರಡು ತಿಂಗಳು ಜನತೆ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸೂಕ್ತ ಚರಂಡಿ ವ್ಯವಸ್ಥೆಗೆ ಒತ್ತಾಯ

ಪೆರ್ಲ-ಪೂವನಡ್ಕ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ಅಧೀನಕ್ಕೆ ವಹಿಸಿಕೊಂಡ ನಂತರ ಪ್ರಸಕ್ತ ರಸ್ತೆಗೆ ಕೋಟ್ಯಂತರ ರೂ. ಮೊತ್ತ ಸುರಿದಿದೆ. ಮೂರು ವರ್ಷಗಳ ಹಿಂದೆ ಪೆರ್ಲದಿಂದ ಕುರಡ್ಕವರೆಗೆ 75ಲಕ್ಷ ರೂ. ವೆಚ್ಚದಲ್ಲಿ ಡಾಂಬರೀಕರಣ ನಡೆಸುವುದರ ಜತೆಗೆ ಪೆರ್ಲದ ಆಯುರ್ವೇದ ಆಸ್ಪತ್ರೆ ಸಮೀಪ ಚರಂಡಿ ನಿರ್ಮಿಸಲು 25 ಲಕ್ಷ ರೂ. ಹೆಚ್ಚು ಮೊತ್ತ ವ್ಯಯಿಸಿ ಕಾಂಕ್ರೀಟ್ ಅಳವಡಿಸಲಾಗಿದೆ. ಆದರೆ ಮಳೆಗಾಲದಲ್ಲಿ ನೀರು ಮಾತ್ರ ರಸ್ತೆಯಲ್ಲೇ ಹರಿಯುವ ಸ್ಥಿತಿ ಎದುರಾಗಿತ್ತು. ಪ್ರಸಕ್ತ 4 ಕೋಟಿ ರೂ. ವೆಚ್ಚದ ಕಾಮಗಾರಿ ನಡೆಯುತ್ತಿದ್ದು ಎಲ್ಲ ಕಾಂಕ್ರೀಟ್ ಸ್ಲಾೃಬ್‌ಗಳನ್ನು ಕಿತ್ತು ಹಾಕಲಾಗಿದೆ. ರಸ್ತೆ ಕಾಮಗಾರಿ ಜತೆಗೆ ಸೂಕ್ತ ಚರಂಡಿ ನಿರ್ಮಿಸದಿದ್ದರೆ ಮತ್ತೆ ಕೋಟ್ಯಂತರ ರೂ. ಪೋಲಾಗುವ ಸಾಧ್ಯತೆಯಿದೆ. ಆದ್ದರಿಂದ ರಸ್ತೆ, ಚರಂಡಿ ವ್ಯವಸ್ಥೆಯೊಂದಿಗೆ ಗುಣಮಟ್ಟದ ಕಾಮಗಾರಿ ನಡೆಸಬೇಕೆಂದು ಜನರು ಆಗ್ರಹಿಸಿದ್ದಾರೆ.

ಕಾಮಗಾರಿಯನ್ನು ಶೀಘ್ರ ಮುಗಿಸುವ ನಿಟ್ಟಿನಲ್ಲಿ ನಾಲ್ಕು ಜೆಸಿಬಿ ಸೇರಿದಂತೆ ಯಂತ್ರೋಪಕರಣಗಳನ್ನೂ ಸಜ್ಜುಗೊಳಿಸಲಾಗಿದೆ. ಕ್ರಶ್ ಮಾಡಲಾದ ರಸ್ತೆ ಮೇಲೆ ಕಾಂಕ್ರೀಟ್ ಮಿಶ್ರಿತ ಜಲ್ಲಿ ಅಳವಡಿಸಿದ ನಂತರ ನಾಲ್ಕು ಇಂಚು ಡಾಂಬರೀಕರಣ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ಕಾಮಗಾರಿ ಪೂರ್ತಿಗೊಳ್ಳಲು ಕನಿಷ್ಠ ಮೂರು ತಿಂಗಳಾದರೂ ಬೇಕಾಗಬಹುದು.
ಕೆ.ಭರತನ್, ಪ್ರಭಾರ ಸಹಾಯಕ ಅಭಿಯಂತ, ಲೋಕೋಪಯೋಗಿ ಇಲಾಖೆ, ಬದಿಯಡ್ಕ ವಿಭಾಗ