_1763297328684.webp?w=480&auto=format%2Ccompress&fit=max)
_1763297328684.webp?w=480&auto=format%2Ccompress&fit=max)
ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಜ್ಞಾನ, ವಿಜ್ಞಾನ, ಸುಜ್ಞಾನದ ಅಪೂರ್ವ ಮಾಹಿತಿ ಕಣಜ ವಸ್ತುಪ್ರದರ್ಶನ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮಗಳಿಗೆ ಶನಿವಾರ ಶ್ರೀ ಮಂಜುನಾಥೇಶ್ವರ ಪ್ರೌಢಶಾಲಾ ವಠಾರದಲ್ಲಿ ರಾಜ್ಯಮಟ್ಟದ ವಸ್ತುಪ್ರದರ್ಶನ ಉದ್ಘಾಟಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಪುಸ್ತಕ ಮಳಿಗೆಗಳು, ಆರೋಗ್ಯ, ಶಿಕ್ಷಣ, ಕೃಷಿ, ವಾಣಿಜ್ಯ, ಜೀವವಿಮೆ, ಸರ್ಕಾರದ ವಿವಿಧ ಇಲಾಖಾ ಮಳಿಗೆಗಳು, ಅಂಚೆ ಇಲಾಖೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಿರಿ ಗ್ರಾಮೋದ್ಯೋಗ ಸಂಸ್ಥೆ, ಗ್ರಾಮೀಣ ಕರಕುಶಲ ಕೈಗಾರಿಕೆಗಳು, ವಸ್ತ್ರ ಮಳಿಗೆಗಳು, ಆಯುರ್ವೇದ ಔಷಧ ಮಳಿಗೆಗಳು, ಪೂಜಾ ಸಾಮಗ್ರಿಗಳು, ಸಿರಿಧಾನ್ಯಗಳು, ಅಡಕೆ ಹಾಳೆತಟ್ಟೆ ತಯಾರಿ ಸೇರಿದಂತೆ 350ಕ್ಕೂ ಮಿಕ್ಕಿ ಮಳಿಗೆಗಳಿದ್ದು, ಪ್ರೇಕ್ಷಕರ ಕಣ್ಮನ ಸೆಳೆಯುತ್ತಿವೆ.
ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಎಲ್ಲ ಮಳಿಗೆಗಳಿಗೆ ಭೇಟಿ ನೀಡಿ ಶುಭಹಾರೈಸಿದರು. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ.ಎಸ್.ಸತೀಶ್ಚಂದ್ರ, ಪ್ರಾಂಶುಪಾಲ ಪ್ರೊ.ಪಿ.ವಿಶ್ವನಾಥ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್‌ಕುಮಾರ್, ಸಿರಿ ಗ್ರಾಮೋದ್ಯೋಗ ಸಂಸ್ಥೆ ಸಿಇಒ ಜನಾರ್ದನ ಕೆ.ಎನ್., ಎಸ್‌ಡಿಎಂ ಕಾಲೇಜಿನ ಡಾ.ಶ್ರೀಧರ ಭಟ್, ಪಿ.ಜಿನರಾಜ ಆರಿಗ ವಗ್ಗ ಮೊದಲಾದವರು ಉಪಸ್ಥಿತರಿದ್ದರು.
ನ.20ರವರೆಗೆ ಪ್ರತಿದಿನ ಬೆಳಗ್ಗೆ 9ರಿಂದ ರಾತ್ರಿ 10ರವರೆಗೆ ವಸ್ತುಪ್ರದರ್ಶನಕ್ಕೆ ಉಚಿತ ಪ್ರವೇಶಾವಕಾಶವಿದೆ. ವಸ್ತುಪ್ರದರ್ಶನ ವೇದಿಕೆಯಲ್ಲಿ ಪ್ರತಿದಿನ ಸಂಜೆ 6ರಿಂದ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.