

ಮನೋಹರ್ ಬಳಂಜ ಬೆಳ್ತಂಗಡಿ
ಉಜಿರೆ-ಪೆರಿಯಶಾಂತಿ ರಸ್ತೆ ಅಭಿವೃದ್ಧಿ ಕಾಮಗಾರಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ವತಿಯಿಂದ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಆರಂಭಗೊಂಡಿದ್ದು, ಇದೀಗ ಸುಮಾರು ಶೇ.20ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಸುಮಾರು 29 ಕಿ.ಮೀ. ಉದ್ದದ ಈ ರಸ್ತೆ ಅಭಿವೃದ್ಧಿಗೆ 315 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಈ ಭಾಗದ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆಯಾಗುವ ನಿರೀಕ್ಷೆಯಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ, ಸುಬ್ರಹ್ಮಣ್ಯ, ಸೌತಡ್ಕ ಸೇರಿದಂತೆ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವ ಭಕ್ತರು ಹಾಗೂ ಪ್ರವಾಸಿಗರಿಗೆ ಈ ರಸ್ತೆ ಪ್ರಮುಖ ಸಂಪರ್ಕ ಮಾರ್ಗವಾಗಿದೆ. ರಸ್ತೆ ಅಭಿವೃದ್ಧಿಯಿಂದ ಧಾರ್ಮಿಕ ಕ್ಷೇತ್ರಗಳಿಗೆ ಆಗಮಿಸುವ ವಾಹನಗಳ ಸಂಚಾರ ಸುಗಮವಾಗುವುದರ ಜತೆಗೆ ಸ್ಥಳೀಯ ಗ್ರಾಮಗಳ ಜನರಿಗೂ ಪ್ರಯಾಣದ ಅನುಕೂಲ ಹೆಚ್ಚಲಿದೆ.
ಯೋಜನೆಯಡಿ ರಸ್ತೆ ಅಗಲೀಕರಣ, ಸೇತುವೆಗಳ ನಿರ್ಮಾಣ, ಚರಂಡಿ ವ್ಯವಸ್ಥೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕೆಲವೆಡೆ ಸೇತುವೆಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದರೆ, ಇನ್ನು ಕೆಲವು ಭಾಗಗಳಲ್ಲಿ ರಸ್ತೆ ಅಗಲೀಕರಣ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ. ರಸ್ತೆ ಅಭಿವೃದ್ಧಿ ಜತೆಗೆ ಮಳೆನೀರು ಸರಾಗವಾಗಿ ಹರಿದುಹೋಗಲು ಅಗತ್ಯ ವ್ಯವಸ್ಥೆ ಕಲ್ಪಿಸುವುದಕ್ಕೂ ಆದ್ಯತೆ ನೀಡಲಾಗುತ್ತಿದೆ.
ಧಾರ್ಮಿಕ ಕ್ಷೇತ್ರಗಳಿಗೆ ವಾರಾಂತ್ಯ ಹಾಗೂ ವಿಶೇಷ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರದ ಒತ್ತಡ ಹೆಚ್ಚಿರುತ್ತದೆ. ರಸ್ತೆ ಅಗಲೀಕರಣದಿಂದ ವಾಹನಗಳ ಸುಗಮ ಸಂಚಾರ ಹಾಗೂ ಪ್ರಯಾಣದ ಸಮಯ ಕಡಿಮೆಯಾಗುವ ನಿರೀಕ್ಷೆಯಿದೆ.
ಉಜಿರೆ-ಧರ್ಮಸ್ಥಳ ರಸ್ತೆಯ ಸಿದ್ಧವನ, ರುಡ್‌ಸೆಟ್ ಸಮೀಪದ ಪೊಯ್ಯೆ ಆಸುಪಾಸಿನಲ್ಲಿ ಡಿವೈಡರ್ ಅಗತ್ಯ ಎಂಬ ಬೇಡಿಕೆ ಸ್ಥಳೀಯರಿಂದ ಕೇಳಿ ಬಂದಿದೆ. ಈ ಪ್ರದೇಶದಲ್ಲಿ ಇದೀಗ ದ್ವಿಪಥ ರಸ್ತೆಯಾಗಿ ನಿರ್ಮಾಣವಾಗುತ್ತಿದೆ. ಸುಮಾರು 2 ಕಿ.ಮೀ ವ್ಯಾಪ್ತಿಯಲ್ಲಿ ಡಿವೈಡರ್ ಇಲ್ಲದೆ ರಸ್ತೆ ನಿರ್ಮಾಣಗೊಂಡಿದೆ. ಇದರಿಂದ ಈ ಪ್ರದೇಶದಲ್ಲಿ ವಾಸಿಸುವ 150ಕ್ಕಿಂತ ಅಧಿಕ ಮಂದಿಗೆ ಡಿವೈಡರ್ ಇಲ್ಲದ ಕಾರಣ ಸುಮಾರು 2 ಕಿ.ಮೀ. ನಷ್ಟು ದೂರ ಸುತ್ತಿ ಬರಬೇಕಿದೆ.