ಕುಗ್ರಾಮದ ರಸ್ತೆಗೆ ಅಭಿವೃದ್ಧಿ ಭಾಗ್ಯ

 ನಾದುರಸ್ತಿಯಲ್ಲಿರುವ ಪಾಪಿತ್ತಡ್ಕ-ನೀರಮೂಲೆ-ಗುರಿನೇರೋಳು ರಸ್ತೆ.
ನಾದುರಸ್ತಿಯಲ್ಲಿರುವ ಪಾಪಿತ್ತಡ್ಕ-ನೀರಮೂಲೆ-ಗುರಿನೇರೋಳು ರಸ್ತೆ.
Published on
ಪುರುಷೋತ್ತಮ ಪೆರ್ಲ ಕಾಸರಗೋಡು
ಎಣ್ಮಕಜೆ ಪಂಚಾಯಿತಿಯ ಕುಗ್ರಾಮವಾಗಿರುವ 18ನೇ ನಲ್ಕ ವಾರ್ಡ್‌ನ ಪಾಪಿತ್ತಡ್ಕ- ನೀರಮೂಲೆ- ಗುರಿನೇರೋಳು ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಪಡಿಸಲು ಕೊನೆಗೂ ಕಾಲಸನ್ನಿಹಿತವಾಗಿದೆ. ಈ ರಸ್ತೆಯನ್ನು ಡಾಂಬರೀಕರಣ ಅಥವಾ ಕಾಂಕ್ರೀಟ್ ಮಾಡಲು 2026-27ನೇ ಸಾಲಿನ ‘ಎಂಪಿಎಲ್ ಎಡಿಎಸ್’ಯೋಜನೆಯಡಿ ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯೆ, ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ ಅಧ್ಯಕ್ಷೆ ಡಾ.ಪಿ.ಟಿ.ಉಷಾ 30 ಲಕ್ಷ ರೂ. ಮಂಜೂರು ಮಾಡಿದ್ದಾರೆ. ಅಲ್ಲದೆ ಈ ಕುರಿತ ಶಿಫಾರಸು ಪತ್ರವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸಿದ್ದಾರೆ.
ರಸ್ತೆ ಅಭಿವೃದ್ಧಿಗೆ ತಾಂತ್ರಿಕ, ಹಣಕಾಸು ಹಾಗೂ ಆಡಳಿತಾತ್ಮಕ ಮಂಜೂರಾತಿ ನೀಡಿ, ‘ಎಂಪಿಎಲ್ ಎಡಿಎಸ್’ ನಿಬಂಧನೆ ಪ್ರಕಾರ ಕಾಮಗಾರಿ ಕೈಗೆತ್ತಿಕೊಂಡು ಕಾಮಗಾರಿಗಳ ಪ್ರಗತಿ ಬಗ್ಗೆ ವರದಿ ಸಲ್ಲಿಸುವಂತೆ ಕೋಯಿಕ್ಕೋಡ್ ಜಿಲ್ಲಾಧಿಕಾರಿ ಸ್ನೇಹಿಲ್ ಕುಮಾರ್ ಸಿಂಗ್ ಅವರಿಗೆ ಕಳುಹಿಸಿದ ಶಿಫಾರಸು ಪತ್ರದಲ್ಲಿ ಸೂಚಿಸಲಾಗಿದೆ. ಶಿಫಾರಸು ಪತ್ರದ ಪ್ರತಿಯನ್ನು ಕಾಸರಗೋಡು ಜಿಲ್ಲಾಧಿಕಾರಿ ಹಾಗೂ ಕಾಸರಗೋಡು, ಕೋಯಿಕ್ಕೋಡ್ ಜಿಲ್ಲಾ ಯೋಜನಾಧಿಕಾರಿಗಳಿಗೂ ಕಳುಹಿಸಿಕೊಡಲಾಗಿದೆ.
ಸರ್ವಋತು ರಸ್ತೆ ನಿರ್ಮಾಣ: ಅಭಿವೃದ್ಧಿ ಮರೀಚಿಕೆಯಾಗಿರುವ ಗ್ರಾಮೀಣ ಪ್ರದೇಶ ನಲ್ಕದ ಪಾಪಿತ್ತಡ್ಕ-ಗುರಿನೇರೋಳು ಪ್ರದೇಶಕ್ಕೆ ರಾಜ್ಯಸಭಾ ಸದಸ್ಯೆಯೊಬ್ಬರ ಅನುದಾನ ಮಂಜೂರಾಗಿ ಲಭಿಸುವ ಮೂಲಕ ಈ ಪ್ರದೇಶದ ಜನತೆಗೆ ಸರ್ವಋತು ಸಂಚಾರದ ರಸ್ತೆ ನಿರ್ಮಾಣದ ಕನಸು ನನಸಾಗಿದೆ.
ಬಿಜೆಪಿ ಹಿರಿಯ ಮುಖಂಡ, ಮಾಜಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರು ಎಣ್ಮಕಜೆ ಪಂಚಾಯಿತಿಗೆ ಭೇಟಿ ನೀಡಿದ್ದ ಸಂದರ್ಭ, ಎಣ್ಮಕಜೆ ಪಂಚಾಯಿತಿಯ 18ನೇ ವಾರ್ಡ್ ಸದಸ್ಯ ಜಗದೀಶ್ ಕುಲಾಲ್ ತಮ್ಮ ವಾರ್ಡಿನ ಪಾಪಿತ್ತಡ್ಕ- ನೀರಮೂಲೆ- ಗುರಿನೇರೋಳು ರಸ್ತೆ ಅವ್ಯವಸ್ಥೆ ಬಗ್ಗೆ ಮನವರಿಕೆ ಮಾಡಿದ್ದರು. ಈ ಬಗ್ಗೆ ಸುರೇಂದ್ರನ್ ರಾಜ್ಯಸಭಾ ಸದಸ್ಯೆ ಡಾ.ಪಿ.ಟಿ.ಉಷಾ ಅವರ ಮೂಲಕ ಅನುದಾನ ಮಂಜೂರು ಮಾಡಿಸಿದ್ದಾರೆ. ಗುರಿನೇರೋಳು ಪ್ರದೇಶದಲ್ಲಿ ಹಲವಾರು ಕುಟುಂಬಗಳು ವಾಸವಿದ್ದು, ಮಳೆಗಾಲದಲ್ಲಿ ಸಂಚಾರ ತೀರಾ ದುಸ್ತರವಾಗಿತ್ತು. ಇದೀಗ ರಸ್ತೆ ಅಭಿವೃದ್ಧಿ ಕಾಣುತ್ತಿದ್ದು, ಪ್ರಸಕ್ತ ರಸ್ತೆಯನ್ನು ಅಡ್ಕಸ್ಥಳಕ್ಕೆ ಸಂಪರ್ಕ ಕಲ್ಪಿಸುವ ರೀತಿಯಲ್ಲಿ ಸಮಗ್ರವಾಗಿ ಅಭಿವೃದ್ಧಿ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪಂಚಾಯಿತಿಯ ಅತ್ಯಂತ ಹಿಂದುಳಿದ ಪ್ರದೇಶದಲ್ಲಿರುವ ಪಾಪಿತ್ತಡ್ಕ-ನೀರಮೂಲೆ- ಗುರಿನೇರೋಳು ರಸ್ತೆಯ ಅಭಿವೃದ್ಧಿಯನ್ನು ಹಲವು ವರ್ಷಗಳಿಂದ ನಿರ್ಲಕ್ಷಿಸಲಾಗಿತ್ತು. ರಾಜ್ಯಸಭಾ ಸದಸ್ಯೆ, ಒಲಿಂಪಿಕ್ಸ್ ಅಸೋಸಿಯೇಶನ್ ಅಧ್ಯಕ್ಷೆ ಡಾ.ಪಿ.ಟಿ.ಉಷಾ ಅವರ ರಾಜ್ಯಸಭಾ ಅನುದಾನದಲ್ಲಿ ಮೊತ್ತ ಬಿಡುಗಡೆಯಾಗಿರುವುದು ಸಂತಸವಾಗಿದೆ. ಮತ್ತಷ್ಟು ಅನುದಾನದೊಂದಿಗೆ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net