

ಉಳ್ಳಾಲ: ಪಂಚ ಗ್ಯಾರಂಟಿ ಜಾರಿ ಮಾಡಿದ ರಾಜ್ಯ ಸರ್ಕಾರ ಬಿಕ್ಕಟ್ಟಿನಲ್ಲಿದೆ ಎಂದು ಆರೋಪಿಸುವ ಬಿಜೆಪಿ, ಸಂಸದರ, ಶಾಸಕರ ವೇತನ ಈಗಾಗಲೇ ಏರಿಕೆ ಮಾಡಿದೆ. ಆದರೆ ಬೀಡಿ ಕಾರ್ಮಿಕರ ವೇತನ ಯಾಕೆ ಏರಿಕೆ ಮಾಡುವುದಿಲ್ಲ, ಅವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. 1000 ಬೀಡಿಗೆ 370 ಆಗಬೇಕು ಎಂಬುದು ನಮ್ಮ ಬೇಡಿಕೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಹೇಳಿದರು.
ಬೀಡಿ ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ, 2018ರಿಂದ ಬಾಕಿ ಇರಿಸಿದ ತುಟ್ಟಿಭತ್ಯೆ ಪಾವತಿ ಹಾಗೂ 2024ರ ಕನಿಷ್ಠ ಕೂಲಿ ಜಾರಿಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ತೊಕ್ಕೊಟ್ಟು ಒಳಪೇಟೆ ಅಂಬೇಡ್ಕರ್ ಮೈದಾನದಲ್ಲಿ ಮಂಗಳವಾರ ಬೀಡಿ ಕಾರ್ಮಿಕರ ಆರನೇ ದ.ಕ. ಜಿಲ್ಲಾ ಸಮ್ಮೇಳನದ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದರು.
ನಿರ್ಮಲಾ ಸೀತಾರಾಮನ್ ಅವರು ತೆರಿಗೆ, ಜಿಎಸ್‌ಟಿ ಏರಿಸುವಾಗ ಬಡವರ ನೆನಪಾಗಲಿಲ್ಲ. ಪ್ರಧಾನಿ ಮೋದಿ ಹಾಗೂ ನಿರ್ಮಲಾ ಸೀತಾರಾಮನ್ ಅವರು ಪಾರ್ಲಿಮೆಂಟ್‌ನಲ್ಲಿ ಪ್ರೊಡಕ್ಟ್ ಯೋಜನೆ ಮಾಡಿದ್ದಾರೆ. ಬಂಡವಾಳಶಾಹಿಗಳಿಗೆ ಎರಡು ಲಕ್ಷ ಕೋಟಿ ನೀಡಲು ಕೇಂದ್ರದಲ್ಲಿ ಹಣ ಇದೆ. ಆದರೆ ಬಡವರಿಗೆ ನೀಡಲು ಹಣ ಇಲ್ಲ ಎಂದು ಆರೋಪಿಸಿದರು.
ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ ಅಧ್ಯಕ್ಷ ವಸಂತ ಆಚಾರಿ ಮಾತನಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ಸುಕುಮಾರ್ ತೊಕ್ಕೊಟ್ಟು ಅಧ್ಯಕ್ಷತೆ ವಹಿಸಿದ್ದರು. ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ ಉಪಾಧ್ಯಕ್ಷೆ ಪದ್ಮಾವತಿ ಎಸ್.ಶೆಟ್ಟಿ, ಜಯಂತಿ ಶೆಟ್ಟಿ, ರಮಣಿ ಮೂಡುಬಿದಿರೆ, ಸಿಐಟಿಯು ಗೌರವ ಅಧ್ಯಕ್ಷ ಬಿ.ಲೋಕಯ್ಯ, ಕಾರ್ಯಾಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಜಯಂತ್ ನಾಯಕ್, ಕೋಶಾಧಿಕಾರಿ ಪದ್ಮಾವತಿ ಶೆಟ್ಟಿ, ಪ್ರೇಮ ಶೆಟ್ಟಿ ಮಂಜೇಶ್ವರ, ಬಿ.ಎಂ.ಭಟ್ ಬೆಳ್ತಂಗಡಿ, ಬೇಬಿ ಶೆಟ್ಟಿ ಮಂಜೇಶ್ವರ ಮತ್ತಿತರರು ಉಪಸ್ಥಿತರಿದ್ದರು.
ವಸಂತಿ ಕುಪ್ಪೆಪದವು ವಂದಿಸಿದರು. ಪ್ರಧಾನ ಕಾರ್ಯದರ್ಶಿ ಜಯಂತ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.