

ಮೂಡುಬಿದಿರೆ: ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಸಾರ್ಧ ಪಂಚಶತಮಾನೋತ್ಸವ ಸಂಭ್ರಮದ ಪ್ರಯುಕ್ತ ಮೂಡುಬಿದಿರೆ ಚಿತ್ರಕಲಾವಿದ ಮಹೇಶ್ ಪಿ.ಹುಲೇಕಲ್ ಅವರು ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರಿಗೆ ಅಮೋಘ ಕಾಣಿಕೆ ಸಮರ್ಪಿಸಿದರು.
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ತನ್ನ ಐದೂವರೆ ಶತಮಾನಗಳ ಪರ್ಯಂತದ ಪರಂಪರೆ ಸಂಭ್ರಮಿಸುತ್ತಿದೆ. ಈ ಸಂದರ್ಭದಲ್ಲಿ ಮೂಡುಬಿದಿರೆ ಕಲಾವಿದ ಮಹೇಶ್ ಪಿ.ಹುಲೇಕಲ್ ಅವರು ತಮ್ಮ ಕಲಾ ಪ್ರತಿಭೆ ಮೂಲಕ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿಗೆ ಅಪರೂಪದ ಕಲಾಕೃತಿ ಅರ್ಪಿಸಿದರು.
ಕಲಾಕೃತಿ ದಕ್ಷಿಣ ಭಾರತದ ಪ್ರಸಿದ್ಧ ತಂಜಾವೂರು ಕಲೆಯ ಶೈಲಿ ಹೊಂದಿದ್ದು, ಅದಕ್ಕೆ ಸ್ವರ್ಣ ಲೇಪನ ನೀಡಿರುವುದು ವಿಶೇಷ. ಪಟ್ಟಾಭಿರಾಮಚಂದ್ರ ದೇವರ ಚಿತ್ರಣ ಸ್ವಾಮೀಜಿ ಅವರಿಗೆ ಕಲಾವಿದರ ಗೌರವ ಮತ್ತು ಮಠದ ಪರಂಪರೆಗೆ ಅವರ ಗೌರವ ಸೂಚಕವಾಗಿದೆ.