ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ - ವಿನೂತನ ಕಾರ್ಯಕ್ರಮ ಆಯೋಜನೆಗೆ ನಿರ್ಧಾರ
ಮಂಗಳೂರು ಕಂಬಳ ಪೂರ್ವಭಾವಿ ಸಭೆಯನ್ನು ಬಿ.ನಾಗರಾಜ ಶೆಟ್ಟಿ ಉದ್ಘಾಟಿಸಿದರು.
Published on:
Copied
Follow Us
ಮಂಗಳೂರು: ಯುವ ಜನರು ಸೇರಿದಂತೆ ಸಮಾನ ಮನಸ್ಕರ ಒಗ್ಗಟ್ಟು, ಧರ್ಮದ ಚಿಂತನೆ, ಸ್ವಾರ್ಥ ರಹಿತ ಕೆಲಸಕ್ಕೆ ಭಗವಂತನ ಆಶೀರ್ವಾದ ಸದಾ ಇರುತ್ತದೆ ಎನ್ನುವುದಕ್ಕೆ ಮಂಗಳೂರು ಕಂಬಳವೇ ಸಾಕ್ಷಿ ಎಂದು ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.
ಡಿ.27ರಂದು ನಡೆಯಲಿರುವ ಮಂಗಳೂರು ಕಂಬಳದ ಕುರಿತಂತೆ ನಗರದ ಪತ್ತುಮುಡಿ ಸೌಧದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಾಮಾನ್ಯ ಯುವಕರೆಲ್ಲ ಸೇರಿಕೊಂಡು ಆರಂಭಿಸಿದ್ದ ಮಂಗಳೂರು ಕಂಬಳಕ್ಕೆ ಈ ಬಾರಿ 9ನೇ ವರ್ಷದ ಸಂಭ್ರಮವಾಗಿರುವುದು ಅತ್ಯಂತ ಖುಷಿಯ ವಿಚಾರ. ಈ ನಿಟ್ಟಿನಲ್ಲಿ ಒಂಬತ್ತು ರೀತಿಯ ವಿಭಿನ್ನ ಕಾರ್ಯಕ್ರಮ ಆಯೋಜಿಸುವ ಯೋಚನೆ ಇಟ್ಟುಕೊಂಡಿದ್ದೇವೆ ಎಂದು ಕ್ಯಾ. ಚೌಟ ತಿಳಿಸಿದ್ದಾರೆ.
ಕರಾವಳಿಯ ಜನಪದ ಕ್ರೀಡೆಯಾದ ಕಂಬಳ ನಿಷೇಧವಾಗುತ್ತದೆ ಎಂದಾಗ ಅದರ ವಿರುದ್ಧ ಮಂಗಳೂರಿನಲ್ಲಿ ಪಕ್ಷ-ಬೇಧವಿಲ್ಲದೆ ದೊಡ್ಡ ಪ್ರತಿಭಟನೆ ನಡೆಸಲಾಗಿತ್ತು. ಮಂಗಳೂರು ನಗರದಲ್ಲಿ ಕಂಬಳ ಆರಂಭಗೊಳ್ಳಲು ಆ ದಿನವೇ ನಿರ್ಧರಿಸಲಾಗಿತ್ತು. ಅದೇ ಹುಮ್ಮಸ್ಸಿನಲ್ಲಿ ಗೋಲ್ಡ್ ಫಿಂಚ್ ಸಮೂಹ ಸಂಸ್ಥೆಯ ಮಾಲೀಕ ಪ್ರಕಾಶ್ ಶೆಟ್ಟಿ ಸಹಕಾರದಲ್ಲಿ ಮಂಗಳೂರು ಕಂಬಳ ಆರಂಭಿಸಲಾಯಿತು.
ಈ ಬಾರಿ 9ನೇ ವರ್ಷ ಆಗಿರುವುದರಿಂದ ಒಂಬತ್ತು ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅದರಲ್ಲಿ ಮರೆಯಾಗುತ್ತಿರುವ ಜನಪದ ಕ್ರೀಡೆ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವುದು ಸೇರಿದಂತೆ ದೇಶ-ವಿದೇಶಗಳಿಗೆ ತೆರಳಿ ಉದ್ಯಮ ಕಟ್ಟಿದ ನಮ್ಮ ಊರಿನ ಸಾಧಕರನ್ನು ಈ ಕಂಬಳಕ್ಕೆ ಕರೆಸಿ ಸನ್ಮಾನಿಸುವ ಚಿಂತನೆ ಕೂಡ ಸೇರಿವೆ. ಶೀಘ್ರದಲ್ಲೇ ಈ ಎಲ್ಲ 9 ಕಾರ್ಯಕ್ರಮಗಳ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಕ್ಯಾ. ಚೌಟ ಹೇಳಿದ್ದಾರೆ.
ಮಾಜಿ ಸಚಿವ ನಾಗರಾಜ ಶೆಟ್ಟಿ ಮಾತನಾಡಿ, ಕಂಬಳದ ರುವಾರಿಯಾಗಿ ಕ್ಯಾ. ಬ್ರಿಜೇಶ್ ಚೌಟ ಅವರು ಪ್ರಧಾನಿ ಮೋದಿ ಸೇರಿದಂತೆ ದೆಹಲಿಯಲ್ಲಿರುವ ಹಲವು ಗಣ್ಯರಿಗೆ ನಮ್ಮ ಕಂಬಳದ ಬಗೆಗಿನ ಸ್ಮರಣಿಕೆಯನ್ನು ನೀಡುವ ಮೂಲಕ ಈ ಜಾನಪದ ಕ್ರೀಡೆಯ ಅರಿವನ್ನು ರಾಷ್ಟ್ರರಾಜಧಾನಿಯಲ್ಲಿಯೂ ಮೂಡಿಸುತ್ತಿದ್ದಾರೆ ಎಂದರು.
ಕಂಬಳ ಸಮಿತಿಯ ಉಪಾಧ್ಯಕ್ಷ ಅನಿಲ್ ಕುಮಾರ್ ಮಾತನಾಡಿ, ಕಂಬಳದಿಂದಾಗಿ ಕುಳೂರಿನಲ್ಲಿ ವ್ಯಾಪಾರ, ವ್ಯವಹಾರ ಸಮೃದ್ಧಿಯಾಗಿ ಸ್ಥಳೀಯವಾಗಿ ಅಭಿವೃದ್ಧಿಗೂ ಕಾರಣವಾಗಿದೆ. ಇದರಿಂದ ಈ ಪ್ರದೇಶದಲ್ಲಿ ಬೇರೆ-ಬೇರೆ ಕಾರ್ಯಕ್ರಮಗಳಿಗೂ ನಾಂದಿ ಹಾಡಿದೆ ಎಂದರು.
ಮಂಗಳೂರು ಕಂಬಳ ಸಮಿತಿಯ ಗೌರವ ಸಲಹೆಗಾರರಾದ ಪ್ರಸಾದ್ ಕುಮಾರ್ ಶೆಟ್ಟಿ, ಕುಳೂರು ಪೊಯ್ಯೆಲು ಪಿ.ಆರ್ ಶೆಟ್ಟಿ, ಕಂಬಳ ಸಮಿತಿಯ ಉಪಾಧ್ಯಕ್ಷರು ಹಾಗೂ ಮಾಜಿ ಮನಪಾ ಸದಸ್ಯರಾದ ಕದ್ರಿ ಮನೋಹರ್ ಶೆಟ್ಟಿ, ಭರತ್ ಸೂಟರ್ ಪೇಟೆ, ಸಂದೀಪ್ ಗರೋಡಿ, ಸಂಜಯ ಪ್ರಭು, ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಜಿತ್ ಪ್ರತಾಪ್ ಮಂಗಲ್ಪಾಡಿ ಉಪಸ್ಥಿತರಿದ್ದರು.
ದೇಶ-ವಿದೇಶಗಳಿಗೆ ತೆರಳಿ ಉದ್ಯಮ ಕಟ್ಟಿದ ನಮ್ಮ ಊರಿನ ಸಾಧಕರನ್ನು ಈ ಕಂಬಳಕ್ಕೆ ಕರೆಸಿ ಸನ್ಮಾನಿಸುವ ಚಿಂತನೆ ಕೂಡ ಸೇರಿವೆ. ಶೀಘ್ರದಲ್ಲೇ ಈ ಎಲ್ಲ 9 ಕಾರ್ಯಕ್ರಮಗಳ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗುವುದು.