೨ನೇ ದಿನವೂ ಆಹೋರಾತ್ರಿ ಧರಣಿ Puttur Protest

ಮನೆ ಕಳೆದುಕೊಂಡ ರಾಧಾಮ್ಮ, ಮುತ್ತು ಸ್ವಾಮಿ, ಪುತ್ರ ಸುಬ್ರಹ್ಮಣ್ಯ ಧರಣಿ ಕುಳಿತಿರುವುದು.
ಮನೆ ಕಳೆದುಕೊಂಡ ರಾಧಾಮ್ಮ, ಮುತ್ತು ಸ್ವಾಮಿ, ಪುತ್ರ ಸುಬ್ರಹ್ಮಣ್ಯ ಧರಣಿ ಕುಳಿತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಮರದಡಿಯೇ ರಾತ್ರಿ ಕಳೆದ ರಾಧಾಮ್ಮ ಕುಟುಂಬ
ಪುತ್ತೂರು: ಮನೆ ಕಳೆದುಕೊಂಡ ಕೌಕ್ರಾಡಿ ಕಾಪಿನಬಾಗಿಲು ನಿವಾಸಿ ರಾಧಾಮ್ಮ ಹಾಗೂ ಮುತ್ತು ಸ್ವಾಮಿ ದಂಪತಿ ನ್ಯಾಯಕ್ಕಾಗಿ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಪ್ರಾರಂಭಿಸಿರುವ ಆಹೋರಾತ್ರಿ ಧರಣಿ ೨ನೇ ದಿನವೂ ಮುಂದುವರಿದಿದೆ.
ವಾರ ಕಳೆದರೂ ಯಾವುದೇ ನ್ಯಾಯ ಸಿಗಲಿಲ್ಲ ಎಂದು ನೀತಿ ತಂಡದ ಜಯಂತ್ ಟಿ. ನೇತೃತ್ವದಲ್ಲಿ ಡಿ.೨೯ರಂದು ತಾಲೂಕು ಆಡಳಿತ ಸೌಧದ ಎದುರು ವೃದ್ಧ ದಂಪತಿ ಮತ್ತೆ ಧರಣಿ ಆರಂಭಿಸಿದ್ದು, ನ್ಯಾಯ ಸಿಗುವ ತನಕ ಕದಡುವುದಿಲ್ಲ ಎಂದು ಪಟ್ಟು ಹಿಡಿದು, ಸೋಮವಾರ ರಾತ್ರಿಯೂ ತಾಲೂಕು ಆಡಳಿತ ಸೌಧದ ಮುಂಭಾಗದ ಮರದಡಿಯಲ್ಲೇ ಮಲಗಿದ್ದ ಅವರು ಮಂಗಳವಾರ ಮುಂಜಾನೆಯಿಂದ ಮತ್ತೆ ಧರಣಿ ಮುಂದುವರಿಸಿದ್ದಾರೆ. ಮನೆ ಕಳೆದುಕೊಂಡ ರಾಧಾಮ್ಮ, ಮುತ್ತು ಸ್ವಾಮಿ ಹಾಗೂ ಪುತ್ರ ಸುಬ್ರಹ್ಮಣ್ಯ ಧರಣಿ ಕುಳಿತಿದ್ದಾರೆ.
೧೦ ಗಂಟೆಯಾದರೂ ಕಚೇರಿಗೆ ಬಾರದ ಅಧಿಕಾರಿಗಳು ಬೆಳಗ್ಗೆ ೫ ಗಂಟೆಗೆ ಬಂದು ನಮ್ಮನ್ನು ಮನೆಯಿಂದ ಹೊರಹಾಕಿ ಆದೇಶ ಉಲ್ಲಂಘನೆ ಮಾಡಿ ಮನೆ ಧ್ವಂಸ ಮಾಡಿದ್ದಾರೆ. ಈಗ ಇರಲು ಮನೆಯಿಲ್ಲ. ಕುಡಿಯಲು ನೀರಿಲ್ಲ. ಒಂದು ವರ್ಷದಿಂದ ಟಾರ್ಪಾಲ್ ಕಟ್ಟಿದ ಮನೆಯಲ್ಲಿಯೇ ಮಳೆಗಾಲ ಕಳೆದಿದ್ದೇವೆ. ಮಳೆ ನೀರನ್ನೇ ಕುಡಿದಿದ್ದೇವೆ. ಸಾಂಬಾರ ಪುಡಿ ಹಾಕಿದ ಊಟ ಮಾಡುತ್ತಿದ್ದು, ಆರೋಗ್ಯ ಹಾಳಾಗಿದೆ. ನಾಲ್ಕೈದು ದನ ಇತ್ತು. ಅದರಲ್ಲಿ ಮೂರು ಸತ್ತುಹೋಗಿವೆ. ಹಾಲು ಮಾರಿ ಜೀವನ ನಡೆಸುತ್ತಿದ್ದೇವು. ಈಗ ಜೀವನಕ್ಕೆ ಸಣ್ಣ ಗೂಡಂಗಡಿ ಇಟ್ಟುಕೊಂಡಿದ್ದರೂ ವ್ಯಾಪಾರವಿಲ್ಲ. ನಮಗೆ ನ್ಯಾಯಕೊಡಿ, ಮನೆ ಕಟ್ಟಿಕೊಡಿ, ಆದ ನಷ್ಟಕ್ಕೆ ಪರಿಹಾರ ಕೊಡುವಂತೆ ಸಂತ್ರಸ್ತ ಮುತ್ತು ಸ್ವಾಮಿ ಅಳಲನ್ನು ತೋಡಿಕೊಂಡಿದ್ದಾರೆ.

ಕಳೆದ ವಾರ ಪ್ರತಿಭಟನೆ ಹಿಂಪಡೆಯಲಾಗಿತ್ತು!

ವಾಸ್ತವ್ಯದ ಮನೆಯನ್ನು ಕಡಬ ತಹಸೀಲ್ದಾರ್ ಮತ್ತು ಅಧಿಕಾರಿಗಳು ನೆಲಸಮ ಮಾಡಿ ಒಂದು ವರ್ಷ ೪೭ ದಿನ ಕಳೆದು ಹೋಗಿದೆ. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಮತ್ತು ನೊಂದ ಕುಟುಂಬಕ್ಕೆ ಕೂಡಲೇ ನ್ಯಾಯ ಒದಗಿಸುವಂತೆ ಆಗ್ರಹಿಸಿ ಡಿ.೨೨ರಂದು ಪುತ್ತೂರು ಉಪವಿಭಾಗಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ನೀತಿ ತಂಡದ ಜಯಂತ್ ಟಿ. ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಆರಂಭಿಸಲಾಗಿತ್ತು. ಈ ಧರಣಿಯಲ್ಲಿ ಮನೆ ಕಳೆದುಕೊಂಡ ರಾಧಾಮ್ಮ ಹಾಗೂ ಮುತ್ತು ಸ್ವಾಮಿ ದಂಪತಿ, ಪುತ್ರಿ ರೇಣುಕಾ, ಅಳಿಯ ವಿಶ್ವನಾಥ, ಪುತ್ರ ಸುಬ್ರಹ್ಮಣ್ಯ ಭಾಗವಹಿಸಿದ್ದರು. ಸಂಜೆ ವೇಳೆ ಸ್ಥಳಕ್ಕೆ ಆಗಮಿಸಿದ ಪ್ರಭಾರ ಸಹಾಯಕ ಆಯುಕ್ತರಾಗಿದ್ದ ತಹಸೀಲ್ದಾರ್ ಮೂರು ದಿನಗಳ ಕಾಲಾವಕಾಶ ಕೇಳಿದ್ದರು. ಈ ಹಿನ್ನೆಲೆಯಲ್ಲಿ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net