ಮಂಗಳೂರು: ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್ ಪೂರೈಕೆಯ ವ್ಯತ್ಯಯದ ಲಾಭವನ್ನು ಸೈಬರ್ ಅಪರಾಧಿಗಳು ಬಳಸಿಕೊಳ್ಳಲು ಆರಂಭಿಸಿದ್ದು, ಸಾರ್ವಜನಿಕರು ಮೋಸ ಹೋಗದಂತೆ ಎಚ್ಚರ ವಹಿಸಲು ಪೊಲೀಸ್ ಇಲಾಖೆ ಸೂಚಿಸಿದೆ.
ನಕಲಿ ಗ್ಯಾಸ್ ಬುಕ್ಕಿಂಗ್ ಲಿಂಕ್, ವೆಬ್‌ಸೈಟ್‌ಗಳನ್ನು ಸೃಷ್ಟಿಸಿ, ಸಾರ್ವಜನಿಕರು ಸಿಲಿಂಡರ್ ಬುಕ್ಕಿಂಗ್ ಮಾಡುವಂತೆ ಹಾಗೂ ಮುಂಗಡವಾಗಿ ಹಣ ಪಾವತಿಸುವಂತೆ ಹೇಳುತ್ತವೆ. ಹಣ ಪಾವತಿಸಿದ ಬಳಿಕ ಸಂಪರ್ಕ ಕಡಿದುಕೊಂಡು ಮೋಸ ಮಾಡುತ್ತವೆ. ಆದ್ದರಿಂದ ಮೊಬೈಲ್‌ಗೆ ಬರುವ ಯಾವುದೇ ಇಂತಹ ನಕಲಿ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು. ಅಧಿಕೃತ ವೆಬ್‌ಸೈಟ್‌ಗಳಲ್ಲಿ ಮಾತ್ರ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ಕಿಂಗ್ ಮಾಡಬೇಕು.
ನೋಂದಣಿ ಮಾಡಿಕೊಡುವ ಹೆಸರಿನಲ್ಲಿ ಸೈಬರ್ ಅಪರಾಧಿಗಳು ಜನರನ್ನು ವಂಚಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದು ಕಂಡುಬಂದಿದೆ.
ಸಾಮಾನ್ಯವಾಗಿ ಅಪರಿಚಿತ ಸಂಖ್ಯೆಯಿಂದ ಕರೆಮಾಡುವ ವಂಚಕರು ಅಡುಗೆ ಅನಿಲ ಸಿಲಿಂಡರ್ ನೋಂದಣಿ, ನವೀಕರಣ, ಕೆವೈಸಿ ಪರಿಶೀಲನೆ ಮುಂತಾದ ಕಾರಣಗಳನ್ನು ನೀಡಿ ಗ್ರಾಹಕರನ್ನು ಭಯಪಡಿಸುತ್ತಾರೆ. ನಂತರ ಬ್ಯಾಂಕ್ ಖಾತೆ ವಿವರಗಳು, ಡೆಬಿಟ್ ಕಾರ್ಡ್ ಸಂಖ್ಯೆ, ಒಟಿಪಿ ಅಥವಾ ಮೊಬೈಲ್‌ಗೆ ಬರುವ ಲಿಂಕ್‌ಗಳನ್ನು ಕ್ಲಿಕ್ ಮಾಡಲು ಹೇಳಿ ಹಣ ವಂಚಿಸುತ್ತಾರೆ. ಜಿಲ್ಲೆಯಲ್ಲಿ ಇಂತಹ ಹಲವು ದೂರುಗಳು ದಾಖಲಾಗಿದ್ದು, ಕೆಲವು ಮಂದಿ ಸಾವಿರಗಳಿಂದ ಲಕ್ಷ ರೂ.ವರೆಗೆ ಹಣ ಕಳೆದುಕೊಂಡಿರುವ ಪ್ರಕರಣಗಳೂ ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆಯಿಂದ ಇರಲು ಮನವಿ ಮಾಡಿದ್ದಾರೆ.
* ಏನೆಲ್ಲಾ ಎಚ್ಚರಿಕೆ ವಹಿಸಬೇಕು?
- ಅನಿಲ ಕಂಪನಿಯ ಹೆಸರಿನಲ್ಲಿ ಬರುವ ಅನುಮಾನಾಸ್ಪದ ಕರೆ ಅಥವಾ ಸಂದೇಶಗಳಿಗೆ ಸ್ಪಂದಿಸಬಾರದು.
- ಬ್ಯಾಂಕ್ ವಿವರಗಳು, ಒಟಿಪಿ ಪಾಸ್‌ವರ್ಡ್ ಇತ್ಯಾದಿ ಮಾಹಿತಿಯನ್ನು ಯಾರಿಗೂ ನೀಡಬಾರದು.
-ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡುವುದನ್ನು ತಪ್ಪಿಸಬೇಕು.
-ವಂಚನೆ ನಡೆದರೆ ತಕ್ಷಣ ಸೈಬರ್ ಕ್ರೈಂ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ನೀಡಬೇಕು.
ಪ್ರಸ್ತುತ ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗುವುದರ ಲಾಭವನ್ನು ವಂಚಕರು ಪಡೆಯಲು ಯತ್ನಿಸುತ್ತಿದ್ದಾರೆ. ನಕಲಿ ವೆಬ್‌ಸೈಟ್‌ಗಳಲ್ಲಿ ಸಿಲಿಂಡರ್ ಬುಕ್ ಮಾಡಿ ಹಣ ಪಾವತಿಸಬೇಡಿ. ಯಾವುದೇ ಕೆಲಸ ಮಾಡುವುದಿದ್ದರೂ ಯೋಚಿಸಿ ಮುಂದುವರಿಯಿರಿ.ಸುಧೀರ್ ಕುಮಾರ್ ರೆಡ್ಡಿಮಂಗಳೂರು ನಗರ ಪೊಲೀಸ್ ಆಯುಕ್ತರು