

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗಳನ್ನು ಹಾಳುಗೆಡಹಲು ಮುಸ್ಲಿಂ ಲೀಗ್ ನಡೆಸುತ್ತಿರುವ ಕ್ರಮ ಮತ್ತು ಇದಕ್ಕೆ ಬೆಂಬಲ ನೀಡುತ್ತಿರುವ ನಗರಸಭೆ ಆಡಳಿತದ ನಿಲುವನ್ನು ವಿರೋಧಿಸಿ ಸಿಪಿಐ(ಎಂ) ನೇತೃತ್ವದ ಕಾಸರಗೋಡು ನಗರಸಭಾ ಸಮಿತಿ ವತಿಯಿಂದ ನಗರಸಭಾ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಕಾಸರಗೋಡು ಮುಖ್ಯ ಅಂಚೆ ಕಚೇರಿ ವಠಾರದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯನ್ನು ನಗರಸಭಾ ಮುಖ್ಯ ದ್ವಾರದ ಮುಂದೆ ಪೊಲೀಸರು ಪ್ರವೇಶ ದ್ವಾರದ ಬಳಿ ನಿರ್ಬಂಧಿಸಿದರು.
ಜಿಲ್ಲಾ ಸಮಿತಿ ಸದಸ್ಯ ಟಿ.ಕೆ.ರಾಜನ್ ಧರಣಿ ಉದ್ಘಾಟಿಸಿದರು. ನಗರಸಭಾ ಸದಸ್ಯೆ ಎಂ.ಲಲಿತಾ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಸಮಿತಿ ಕಾರ್ಯದರ್ಶಿಗಳಾದ ಎಸ್.ಸುನೀಲ್, ಅನಿಲ್ ಚೆನ್ನಿಕ್ಕರ, ಜಿಲ್ಲಾ ಸಮಿತಿ ಸದಸ್ಯ ಕೆ.ಎ.ಮುಹಮ್ಮದ್ ಹನೀ ಮೊದಲಾದವರಿದ್ದರು.