ಬಾಲಕಿಗೆ ಲೈಂಗಿಕ ದೌರ್ಜನ್ಯ ಸಾಬೀತು ಅಪರಾಧಿಗೆ 4.6 ವರ್ಷ ಜೈಲು

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳು ಆಕೆಯ ಪರಿಚಿತನ ಜತೆ ಇದ್ದಾಗ ಪೊಟೋ ತೆಗೆದು ಅನಂತರ ಬಾಲಕಿಯನ್ನು ಹಿಂಬಾಲಿಸಿ ಆಕೆಯನ್ನು ಬ್ಲಾೃಕ್ ಮೇಲ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯ ಅಪರಾಧ ಸಾಬೀತಾಗಿದ್ದು, ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ ಟಿ ಎಸ್ ಸಿ 2 (ಪೊಕ್ಸೊ) ನ್ಯಾಯಾಲಯದ ನ್ಯಾಯಾಧೀಶರಾದ ಮಾನು ಕೆ.ಎಸ್ ಅವರು 4 ವರ್ಷ, 6 ತಿಂಗಳು ಕಠಿನ ಸಜೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಬಜಪೆ ಶಾಂತಿಗುಡ್ಡೆ ನಿವಾಸಿ ಮೊಹಮ್ಮದ್ ಸಫ್ವಾನ್ ಆಲಿಯಾಸ್ ಸಫ್ವಾನ್ (32) ಶಿಕ್ಷೆಗೊಳಗಾದ ಅಪರಾಧಿ.
ಸೋಮೇಶ್ವರದ 15 ವರ್ಷದ ಬಾಲಕಿಯನ್ನು ಪರಿಚಿತನೋರ್ವ 2025ರ ಮಾ.30 ರಂದು ಕದ್ರಿ ಪಾರ್ಕ್ ಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಅವರಿಬ್ಬರು ಜತೆಯಾಗಿ ಕುಳಿತಿದ್ದಾಗ ಸಫ್ವಾನ್ ಬಂದು ಪೊಟೋ ಕ್ಲಿಕ್ಕಿಸಿದ್ದ. ಅನಂತರ ಬಾಲಕಿ ಮನೆ ಕಡೆಗೆ ಹೊರಟಾಗ ಆಕೆಯನ್ನು ಸ್ಕೂಟರ್ ನಲ್ಲಿ ಹಿಂಬಾಲಿಸಿಕೊಂಡು ಹೋಗಿದ್ದ. ದಾರಿ ಮಧ್ಯೆ ಆಕೆಯನ್ನುದ್ದೇಶಿಸಿ ನಿನ್ನ ಪೊಟೋ ನನ್ನ ಬಳಿ ಇದೆ. ಇದನ್ನು ತಂದೆಗೆ ಹೇಳಬೇಕಾ ಎಂದು ಕೇಳಿದ. ಬಾಲಕಿ ಮುಂದೆ ನಡೆದುಕೊಂಡು ಹೋದಾಗ ಆಕೆಯ ಕೈ ಹಿಡಿದು ಆಕೆಯ ಫ್ಲಾೃಟ್ ನ ಕಟ್ಟಡಕ್ಕೆ ಹೋದ. ಅಲ್ಲಿ ಕಟ್ಟಡದ ಮೇಲೆ ಹತ್ತುವಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಅನಂತರ ಆಕೆಯ ತಮ್ಮ ಬರುವ ಶಬ್ದ ಕೇಳಿ ಅಲ್ಲಿಂದ ಪರಾರಿಯಾಗಿದ್ದ. ನಡೆದ ವಿಷಯವನ್ನು ಬಾಲಕಿ ಮನೆಯವರಿಗೆ ತಿಳಿಸಿದ್ದಳು. ಅದರಂತೆ ಪ್ರಕರಣ ದಾಖಲಾಗಿತ್ತು. ಪಾಂಡೇಶ್ವರ ಮಹಿಳಾ ಠಾಣೆಯ ಇನ್ಸ್ ಪೆಕ್ಟರ್ ಬಾಲಕೃಷ್ಣ ಎಚ್. ಎನ್. ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ ಪೋಕ್ಸೊ ಕಾಯಿದೆಯ ಕಲಂ 8 ಮತ್ತು ಬಿಎನ್ ಎಸ್ ಕಲಂ 75(1) ಅಡಿಯಲ್ಲಿ 3 ವರ್ಷ ಕಠಿನ ಸಜೆ, 15,000ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 2 ತಿಂಗಳ ಸಾಮಾನ್ಯ ಸಜೆ, ಬಿಎನ್‌ಸ್ ಕಲಂ 78ರ ಅಡಿಯಲ್ಲಿ 1 ವರ್ಷ 6 ತಿಂಗಳ ಸಾಮಾನ್ಯ ಸಜೆ, 5,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 1 ತಿಂಗಳ ಸಾಮಾನ್ಯ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.
ದಂಡದ ಮೊತ್ತ 20,000 ರೂ. ಹಾಗೂ ಹೆಚ್ಚುವರಿ 30,000 ರೂ.ಗಳನ್ನು ಸಂತ್ರಸ್ತೆಯಾದ ಬಾಲಕಿಗೆ ಪರಿಹಾರವಾಗಿ ನೀಡಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ.
ಪ್ರಾಸಿಕ್ಯೂಷನ್ ಪರವಾಗಿ ಪೋಕ್ಸೊ ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ಅವರು ವಾದ ಮಂಡಿಸಿ ಸಾಕ್ಷೃ ವಿಚಾರಣೆ ನಡೆಸಿದ್ದರು.
ಬಾಲಕಿಯ ಜತೆಗಿದ್ದ ಪರಿಚಿತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆಯೂ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net