ಪೋಕ್ಸೊ ಪ್ರಕರಣ ಸಾಬೀತು ಅಪರಾಧಿಗೆ 8 ವರ್ಷ ಶಿಕ್ಷೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಂಗಳೂರು: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ ಟಿ ಎಸ್ ಸಿ- 1(ಪೋಕ್ಸೊ) ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗೆ ಒಟ್ಟು 8 ವರ್ಷ ಸಜೆ ವಿಧಿಸಿದೆ.
ಬೆಳ್ತಂಗಡಿಯ ಶಂಕರ ಗೌಡ(60) ಶಿಕ್ಷೆಗೊಳಗಾದವನು.
ಪ್ರಕರಣದ ವಿವರ:
2025 ರ ಮಾರ್ಚ್‌ನಲ್ಲಿ ಶಂಕರಗೌಡ ತನಗೆ ಪರಿಚಯವಿದ್ದ ಬಾಲಕಿಯ ಮನೆಗೆ ತೆರಳಿ ಮನೆಯಲ್ಲಿ ಅಪ್ರಾಪ್ತೆ ಬಾಲಕಿ ಮಾತ್ರ ಇದ್ದುದನ್ನು ಗಮನಿಸಿ ಆಕೆಯಲ್ಲಿ ಆಕೆಯ ತಂದೆ ತಾಯಿ ಹೊರಗೆ ಹೋಗಿರುವುದನ್ನು ಖಚಿತಪಡಿಸಿಕೊಂಡಿದ್ದ. ಬಳಿಕ ನೀರು ಬೇಕೆಂದು ಕೇಳಿದ. ಆಕೆ ನೀರು ತರಲು ಒಳಗೆ ಹೋದಾಗ ಆಕೆಯನ್ನು ಹಿಡಿದು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದ. ಬಾಲಕಿ ಆತನಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಆತ ಲೈಂಗಿಕ ಕಿರುಕುಳ ನೀಡಿದ್ದ. ಬಳಿಕ ಬಾಲಕಿ ಆತನ ಕೈಗೆ ಕಚ್ಚಿ ಮನೆಯ ಹಿಂಬಾಗಿಲಿನ ಮೂಲಕ ಹೊರಗೆ ಓಡಿ ಪಕ್ಕದಲ್ಲಿದ್ದ ಸಂಬಂಧಿಕರ ಮನೆಗೆ ಹೋಗಿ ತಪ್ಪಿಸಿಕೊಂಡಿದ್ದಳು. ಈ ಸಂದರ್ಭ ಆರೋಪಿ ಬೆದರಿಕೆ ಹಾಕಿದ್ದ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ ಟಿ ಎಸ್ ಸಿ 1(ಪೋಕ್ಸೊ) ನ್ಯಾಯಾಲಯದ ನ್ಯಾಯಾಧೀಶರಾದ ಮೋಹನ ಜೆ.ಎಸ್ ಅವರು ಆರೋಪಿಗೆ ಒಟ್ಟು 8 ವರ್ಷ ಶಿಕ್ಷೆ ವಿಧಿಸಿದ್ದಾರೆ.
ಬಿ ಎನ್ ಎಸ್ ಕಲಂ 74 ರಡಿ 3 ವರ್ಷ ಕಠಿನ ಸಜೆ, 20,000 ರೂ.ದಂಡ, ಒಂದು ವೇಳೆ ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 6 ತಿಂಗಳ ಸಾದಾ ಸಜೆ, ಬಿಎನ್ ಎಸ್ ಕಲಂ 75 (2)ರಡಿ 2 ವರ್ಷ ಕಠಿನ ಸಜೆ, 15,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 4 ತಿಂಗಳು ಸಾದಾ ಸಜೆ, ಪೋಕ್ಸೋ ಕಾಯಿದೆಯ ಕಲಂ 8 ರಡಿ 3 ವರ್ಷ ಕಠಿನ ಸಜೆ, 20,000 ರೂ.ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 6 ತಿಂಗಳ ಸಾದಾ ಸಜೆ ವಿಧಿಸಿ, ಈ ಶಿಕ್ಷೆಗಳನ್ನು ಜತೆಯಾಗಿ ಅನುಭವಿಸುವಂತೆ ಮಂಗಳವಾರದಂದು ತೀರ್ಪು ನೀಡಿದ್ದಾರೆ.
2 ಲಕ್ಷ ರೂ ಪರಿಹಾರ
ದಂಡದ ಮೊತ್ತದಲ್ಲಿ 50,000 ರೂ. ಅಲ್ಲದೆ 1.50 ಲ.ರೂ ಹೆಚ್ಚುವರಿ ಪರಿಹಾರವನ್ನು ಸಂತ್ರಸ್ತೆಯಾದ ಬಾಲಕಿಗೆ ನೀಡಬೇಕು ಎಂದು ನ್ಯಾಯಾಧೀಶರು ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ. ಧರ್ಮಸ್ಥಳ ಠಾಣಾಧಿಕಾರಿಯಾಗಿದ್ದ ಸಮರ್ಥ್ ರವೀಂದ್ರ ಗಾಣಿಗೇರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪೊಕ್ಸೋ ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ಅವರು ಪ್ರಾಸಿಕ್ಯೂಷನ್ ಪರ ಸಾಕ್ಷಿ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net