ಮುಂದುವರಿದ ಕಾಡಾನೆ ಹಾವಳಿ

ಅಪಾರ ಪ್ರಮಾಣದ ಕೃಷಿ ನಾಶ
ಪೆರ್ನಾಜೆಯ ರಾಘವೇಂದ್ರ ಭಟ್ ಅವರ ತೋಟದಲ್ಲಿ ಕಾಡಾನೆ ದಾಳಿಗೆ ನಾಶವಾಗಿರುವ ಕೃಷಿ.
ಪೆರ್ನಾಜೆಯ ರಾಘವೇಂದ್ರ ಭಟ್ ಅವರ ತೋಟದಲ್ಲಿ ಕಾಡಾನೆ ದಾಳಿಗೆ ನಾಶವಾಗಿರುವ ಕೃಷಿ.
Published on: 

ಪುತ್ತೂರು ಗ್ರಾಮಾಂತರ: ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ ವ್ಯಾಪ್ತಿಯಲ್ಲಿ ಮೂರು ದಿನಗಳಿಂದ ನಿರಂತರವಾಗಿ ಲಗ್ಗೆಯಿಟ್ಟಿರುವ ಕಾಡಾನೆಗಳು ಅಪಾರ ಪ್ರಮಾಣದ ಕೃಷಿ ಹಾನಿ ಮಾಡಿವೆ.

ಪೆರ್ನಾಜೆ ಕೃಷಿಕರಾದ ರಾಘವೇಂದ್ರ ಭಟ್, ಕುಮಾರ್ ಪೆರ್ನಾಜೆ, ಗೋಪಾಲಕೃಷ್ಣ ಕಲ್ಲೂರಾಯ ಅವರ ತೋಟಗಳಿಗೆ ನುಗ್ಗಿರುವ ಎರಡು ಕಾಡಾನೆಗಳು ಬಾಳೆ, ಅಡಿಕೆ ಗಿಡಗಳನ್ನು ಧ್ವಂಸಗೊಳಿಸಿವೆ.

ಶುಕ್ರವಾರ ರಾತ್ರಿ ಬಂದ ಕಾಡಾನೆಗಳು ರಾಘವೇಂದ್ರ ಭಟ್ ಅವರ ತೋಟದಲ್ಲಿ 50ಕ್ಕೂ ಅಧಿಕ ಬಾಳೆ ಗಿಡ, ಫಸಲು ಬರುತಿದ್ದ ಅಡಿಕೆ ಮರಗಳ ಸಹಿತ 15 ಅಡಿಕೆ ಗಿಡಗಳನ್ನು ಮುರಿದು ನಾಶ ಮಾಡಿವೆ. ಕುಮಾರ್ ಅವರ ತೋಟದಲ್ಲಿ 300ಕ್ಕೂ ಅಧಿಕ ಬಾಳೆ ಗಿಡ ಹಾಗೂ ಅಡಿಕೆ ಮರವನ್ನು ನಾಶಗೊಳಿಸಿದೆ.

ಕಾಡಾನೆಗಳು ರಾತ್ರಿಯಾಗುತ್ತಲೇ ಪೆರ್ನಾಜೆ ವ್ಯಾಪ್ತಿಯ ಕೃಷಿ ತೋಟಗಳಿಗೆ ಲಗ್ಗೆಯಿಟ್ಟು ಕೃಷಿ ಹಾನಿ ಮಾಡಿ ಬೆಳಗ್ಗಿನ ವೇಳೆಗೆ ಆನೆಗುಂಡಿ ರಕ್ಷಿತಾರಣ್ಯ ಸೇರಿಕೊಳ್ಳುತ್ತಿವೆ. ಕಾಡಾನೆಗಳು ಬಂದ ಬಗ್ಗೆ ಮಾಹಿತಿ ನೀಡಿದ ಬೆನ್ನಲ್ಲೇ ಇಟಿಎಫ್ ತಂಡದವರು ಬಂದು ಗರ್ನಾಲ್ ಸಿಡಿಸಿ ಕಾಡಾನೆಗಳನ್ನು ಓಡಿಸುತ್ತಾರೆ. ಆದರೆ ಒಂದು ತೋಟದಿಂದ ಮತ್ತೊಂದು ಕಡೆಗೆ ಓಡಿಹೋಗುವ ಕಾಡಾನೆಗಳು ಸ್ವಲ್ಪ ಸಮಯದಲ್ಲಿ ಮತ್ತೆ ತಿರುಗಿ ಬರುತ್ತಿವೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net