

ಕಾಸರಗೋಡು: ಪೈವಳಿಕೆಯಲ್ಲಿ ಟ್ಯಾಂಕರ್ ಲಾರಿಯಲ್ಲಿ ಪಾಯಿಖಾನೆ ತ್ಯಾಜ್ಯ ಮನೆ ಪರಿಸರದಲ್ಲಿ ಉಪೇಕ್ಷಿಸಿರುವ ಬಗ್ಗೆ ಮನೆ ಮಾಲೀಕ ನೀಡಿದ ದೂರಿನಂತೆ ಪೈವಳಿಕೆ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದರು. ಜತೆಗೆ ಮಂಜೇಶ್ವರ ಠಾಣೆ ಪೊಲೀಸರೂ ತನಿಖೆಗೆ ಚಾಲನೆ ನೀಡಿದ್ದಾರೆ.
ಪೈವಳಿಕೆ ಪಂಚಾಯಿತಿಯ ಏದಾರ್ ನಿವಾಸಿ ರಾಮ ಎಂಬುವರ ಮನೆ ವಠಾರ ಸೇರಿದಂತೆ ವಿವಿಧೆಡೆ ಶುಕ್ರವಾರ ರಾತ್ರಿ ಪಾಯಿಖಾನೆ ತ್ಯಾಜ್ಯ ಹರಿಯಬಿಡಲಾಗಿದೆ. ರಸ್ತೆಯಲ್ಲಿ ಟ್ಯಾಂಕರ್ ಲಾರಿ ನಿಲ್ಲಿಸಿ ತಗ್ಗು ಪ್ರದೇಶಕ್ಕೆ ಪೈಪ್ ಮೂಲಕ ಮಲಿನ ಜಲ ಹರಿಯಬಿಡಲಾಗಿದೆ. ಇದರಿಂದ ವ್ಯಾಪಕ ದುರ್ವಾಸನೆಗೆ ಕಾರಣವಾಗುತ್ತಿರುವುದಾಗಿ ಸ್ಥಳೀಯ ನಿವಾಸಿಗಳು ದೂರಿದ್ದಾರೆ. ತ್ಯಾಜ್ಯ ಸುರಿದ ವಾಹನ ಪತ್ತೆಹಚ್ಚಲು ವಿವಿಧ ಸ್ಥಳಗಳಲ್ಲಿರುವ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ.