

ಮೂಡುಬಿದಿರೆ: ಟ್ರೈ ಗ್ರಾಹಕರ ಹಕ್ಕುಗಳನ್ನು ಕಾಪಾಡುವ ಪ್ರಮುಖ ಸಂಸ್ಥೆಯಾಗಿದ್ದು, ಗ್ರಾಹಕರು ತಮ್ಮ ಹಕ್ಕುಗಳನ್ನು ತಿಳಿದುಕೊಂಡು ದೂರು ಸಲ್ಲಿಸಿದರೆ ಉತ್ತಮ ಸೇವೆ ಪಡೆಯಲು ಸಾಧ್ಯ ಎಂದು ಕರ್ನಾಟಕದ ಗ್ರಾಹಕ ಮತ್ತು ಸ್ವಯಂಸೇವಾ ಸಂಸ್ಥೆಗಳ ಸಂಘಟಿತ ಒಕ್ಕೂಟದ ಮುಖ್ಯ ಪೋಷಕ ಹಾಗೂ ಸ್ಥಾಪಕ ಸೋಮಶೇಖರ್ ವಿ.ಕೆ. ಹೇಳಿದರು.
ಆಳ್ವಾಸ್ ಸಂಸ್ಥೆಯ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಕರ್ನಾಟಕದ ಗ್ರಾಹಕ ಮತ್ತು ಸ್ವಯಂಸೇವಾ ಸಂಸ್ಥೆಗಳ ಸಂಘಟಿತ ಒಕ್ಕೂಟ ಹಾಗೂ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಆಶ್ರಯದಲ್ಲಿ ನಡೆದ ಗ್ರಾಹಕರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಹಕರಿಗೆ ಟ್ರೈ ನೀಡಿರುವ ಮುಖ್ಯ ಹಕ್ಕುಗಳಾದ ಗುಣಮಟ್ಟದ ಸೇವೆ ಪಡೆಯುವ ಹಕ್ಕು, ಸರಿಯಾದ ಬಿಲ್ ಪಡೆಯುವ ಹಕ್ಕು ಮುಂತಾದ ವಿಷಯಗಳನ್ನು ವಿವರಿಸಿದರು. ಸ್ಪಾೃಮ್ ಕರೆಗಳು ಮತ್ತು ಎಸ್‌ಎಂಎಸ್‌ಗಳನ್ನು ತಡೆಯಲು 1909ಕ್ಕೆ ಕರೆ ಮಾಡಿ ಡಿಎನ್‌ಡಿ ಸೇವೆ ಸಕ್ರಿಯಗೊಳಿಸಬಹುದೆಂದು ತಿಳಿಸಿದರು.
ಉಡುಪಿ ಗ್ರಾಹಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಶಾಸಕ ಉಮಾನಾಥ್ ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿದರು. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪ್ರತಿಭಾ, ಸಂಘದ ಪದಾಧಿಕಾರಿ ವಿದ್ಯಾ, ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ.ಸದಾಕತ್, ಉಪಪ್ರಾಂಶುಪಾಲೆ ಝಾನ್ಸಿ ಇದ್ದರು.
ಕಾರ್ಯಕ್ರಮ ಸಂಯೋಜಕಿ ಡಾ.ಸುಲತಾ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ರಶ್ಮಿನ್ ನಿರೂಪಿಸಿದರು. ಉಪನ್ಯಾಸಕಿ ಮೇಘನಾ ವಂದಿಸಿದರು.