

ಮಂಗಳೂರು: ಚುನಾವಣಾ ಆಯೋಗ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯ. ಇದರ ಮುಖ್ಯ ಆಯುಕ್ತರು ಏಕಪಕ್ಷೀಯ ನಿರ್ಧಾರ ಅನುಸರಿಸುತ್ತಿರುವುದರ ವಿರುದ್ಧ ಕಾಂಗ್ರೆಸ್ ಸೆ.28ರಂದು ಮಂಗಳೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಿದೆ ಎಂದು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಪದ್ಮರಾಜ್ ಆರ್. ತಿಳಿಸಿದ್ದಾರೆ.
ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಚುನಾವಣಾ ಪ್ರಕ್ರಿಯೆಯ ಸಮಗ್ರತೆಗೆ ಧಕ್ಕೆ ತಂದಿದ್ದಾರೆ. ಮತದಾರರ ಪಟ್ಟಿಯಲ್ಲಿ ಅಕ್ರಮ ಎಸಗಿದ್ದಾರೆ. ಆದ್ದರಿಂದ ಅವರನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ. ಬೆಳಗ್ಗೆ 10.30 ಗಂಟೆಗೆ ಪಂಪುವೆಲ್ ವೃತ್ತದಿಂದ ಪಡೀಲ್ ಜಿಲ್ಲಾಧಿಕಾರಿ ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಕಾಂಗ್ರೆಸ್ ಕಾರ್ಯಕರ್ತರು ಅಲ್ಲದೆ ಸಾರ್ವಜನಿಕರು ಕೂಡಾ ಇದರಲ್ಲಿ ಭಾಗವಹಿಸಬೇಕು ಎಂದವರು ಹೇಳಿದರು.
ಮಾಜಿ ಸಂಸದ ಪ್ರತಾಪ್ ಸಿಂಹ ಅವರು ತುಳು ಭಾಷೆಗೆ ಎರಡನೇ ಭಾಷಾ ಪ್ರಾಧಾನ್ಯತೆ ನೀಡಿರುವುದರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಇಲ್ಲಿನ ಬಿಜೆಪಿ ನಾಯಕರು ಅವರಿಗೆ ಬುದ್ದಿ ಹೇಳಬೇಕು. ತುಳುನಾಡಿನ ಜನರ ಕ್ಷಮೆ ಯಾಚಿಸಬೇಕು. ಕಾಂಗ್ರೆಸ್ ಸರ್ಕಾರ ಜನರ ಭಾವನೆಗೆ ಗೌರವ ಕೆಲಸ ಮಾಡಿದೆ ಎಂದರು.
ಆರ್ಥಿಕ ಇಲಾಖೆ ಮುಖ್ಯಮಂತ್ರಿಯವರಿಗೆ ಸಲಹೆ ನೀಡುವುದು ಸಾಮಾನ್ಯ. ರಾಜ್ಯ ಸರ್ಕಾರ ಮೂಲಭೂತ ಸೌಲಭ್ಯ ಕಲ್ಪಿಸಿ ಅಭಿವೃದ್ಧಿ ಮಾಡುವುದನ್ನು ಬಿಜೆಪಿ ನಾಯಕರಿಗೆ ನೋಡಲಾಗುತ್ತಿಲ್ಲ. ರಾಜ್ಯ ತೆರಿಗೆ ಪಾವತಿಯಲ್ಲಿ 2ನೇ ಸ್ಥಾನದಲ್ಲಿದೆ. ಅದರಲ್ಲಿ ರಾಜ್ಯದ ಪಾಲು ಕೇಳಲು ಬಿಜೆಪಿ ನಾಯಕರಿಗೆ ಬಾಯಿ ಬರುವುದಿಲ್ಲ. ಪ್ರತಿಭಟನೆ ಮಾಡಿ ಅತ್ಯಂತ ಕೀಳು ಮಟ್ಟದಲ್ಲಿ ಮಾತನಾಡುತ್ತಾರೆ. ಜನರು ಇವರ ವರ್ತನೆಯನ್ನು ಗಮನಿಸುತ್ತಿದ್ದಾರೆ. ಬಿಜೆಪಿಗೆ ಜನರ ಅಭಿವೃದ್ಧಿಯಲ್ಲಿ ಆಸಕ್ತಿ ಇಲ್ಲ. ಭಾವನಾತ್ಮಕವಾಗಿ ಯಾಮಾರಿಸುವುದು ಅವರ ಉದ್ದೇಶ ಎಂದವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್ ಕುಮಾರ್, ಮುಖಂಡರಾದ ಶಶಿಧರ ಹೆಗ್ಡೆ, ಮಮತಾ ಗಟ್ಟಿ, ಅಪ್ಪಿ, ಶುಭೋದಯ ಆಳ್ವ, ಪುರುಷೋತ್ತಮ ಚಿತ್ರಾಪುರ, ಲ್ಯಾನ್ಸ್ ಲಾಟ್ ಪಿಂಟೋ, ಅಶೋಕ್ ಡಿ.ಕೆ. ಮೊದಲಾದವರಿದ್ದರು.