_1765109909369.webp?w=480&auto=format%2Ccompress&fit=max)
_1765109909369.webp?w=480&auto=format%2Ccompress&fit=max)
ಮೂಡುಬಿದಿರೆ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿದ್ಯುತ್ ಲೈನ್(400 ಕೆ.ವಿ ಯುಕೆಟಿಎಲ್) ಕಾಮಗಾರಿ ಗುತ್ತಿಗೆ ಪಡೆದಿರುವ ಸ್ಟೆರ್‌ಲೈಟ್ ವಿದ್ಯುತ್ ಕಂಪನಿ ರೈತರ ಮೇಲೆ ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಹಾಗೂ ಮೂಡುಬಿದಿರೆ ಶಾಸಕರು ತಾಲೂಕು ಕೆಡಿಪಿ ಹಾಗೂ ಅಕ್ರಮ-ಸಕ್ರಮ ಸಭೆ ನಡೆಸದೆ ರೈತರು ಹಾಗೂ ಜನಸಾಮಾನ್ಯರಿಗೆ ಮಾಡುತ್ತಿರುವ ಅನ್ಯಾಯ ಎಂದು ಆರೋಪಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಡಳಿತ ಸೌಧದ ಎದುರು ಬೃಹತ್ ಪ್ರತಿಭಟನೆ ನಡೆಯಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮಾತನಾಡಿ, ಸ್ಟೆರ್‌ಲೈಟ್ ಕಂಪನಿ ರೈತರಿಗೆ ಅನ್ಯಾಯ ಎಸಗುತ್ತಿದ್ದು, ರೈತರಿಗೆ ತೊಂದರೆಯಾದರೆ ಕಾಂಗ್ರೆಸ್ ಸಹಿಸುವುದಿಲ್ಲ, ಕೇಂದ್ರ ಸರ್ಕಾರದ ಬಲ ಇದೆ ಎಂದು ತೋರಿಸಲು ಮುಂದಾದರೆ, ಕಾಂಗ್ರೆಸ್ ತನ್ನ ಶಕ್ತಿ ಪ್ರದರ್ಶಿಸಬೇಕಾಗುತ್ತದೆ. ಅಗತ್ಯ ಬಿದ್ದರೆ ಸ್ಟೆರ್‌ಲೈಟ್ ಕಂಪನಿಯನ್ನು ಆಂಧ್ರಪ್ರದೇಶಕ್ಕೆ ವಾಪಸ್ ಕಳುಹಿಸಲು ಕೂಡ ಹಿಂಜರಿಯುವುದಿಲ್ಲ. ಬಿಜೆಪಿ ಪದಾಧಿಕಾರಿಯಾದ ಒಬ್ಬ ಮುಖಂಡರು ಹಸಿರು ಶಾಲು ಹಾಕಿದ ಮಾತ್ರಕ್ಕೆ ಯಾರೂ ರೈತ ಮುಖಂಡರಾಗುವುದಿಲ್ಲ ಎಂದು ಆಗ್ರಹಿಸಿದರು.
ಅಕ್ರಮ-ಸಕ್ರಮ ಸಮಿತಿ, ಕೆಡಿಪಿ, ಆಶ್ರಯ ಮುಂತಾದ ಸಮಿತಿ ರಚನೆಯಾಗಿ ಎರಡು ವರ್ಷ ಸಮೀಪಿಸುತ್ತಿದ್ದರೂ, ಅದರ ಅಧ್ಯಕ್ಷರಾದ ಶಾಸಕರು ಒಮ್ಮೆಯೂ ಸಭೆ ನಡೆಸಿಲ್ಲ, ಇದು ಬಡವರು ಮತ್ತು ರೈತರ ಬಗ್ಗೆ ಇರುವ ಕಾಳಜಿ ತೋರಿಸುತ್ತದೆ. ಶಾಸಕರಿಗೆ ಹತ್ತು ದಿನ ಗಡುವು ನೀಡಲಾಗಿದೆ. ಈ ಅವಧಿಯೊಳಗೆ ಸಮಿತಿಗಳ ಸಭೆ ನಡೆಸದಿದ್ದರೆ, ಅವರ ಕಚೇರಿಗೆ ನುಗ್ಗಿ ಪ್ರತಿಭಟನೆ ನಡೆಸುವುದಾಗಿ ಮಿಥುನ್ ರೈ ಎಚ್ಚರಿಸಿದರು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್, ಕಾರ್ಯದರ್ಶಿ ಪುರಂದರ ದೇವಾಡಿಗ, ಮುಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಬ್ಲಾಕ್ ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಅನೀಶ್ ಡಿಸೋಜ, ಮಿತ್ತಬೈಲು ವಾಸುದೇವ ನಾಯಕ್, ರಮೇಶ್ ಶೆಟ್ಟಿ, ಚಂದ್ರಹಾಸ ಸನಿಲ್, ಟಿ.ಎನ್.ಕೆಂಬಾರೆ, ಶೌಕತ್ ಬೆಳುವಾಯಿ, ಅಬ್ದುಲ್ ಲತೀಫ್, ಜೊಸ್ಸಿ ಮಿನೇಜಸ್, ಶಶಿಧರ ಎಂ., ಹರೀಶ್ ಆಚಾರ್ಯ, ರುಕ್ಕಯ್ಯ ಪೂಜಾರಿ, ಇಕ್ಬಾಲ್ ಕರೀಮ್, ಅಲ್ತಾಫ್, ರತ್ನಾಕರ ಮೊಯ್ಲಿ, ಝಕರಿಯಾ ಯೂಸುಫ್, ರೀಟಾ ಕುಟಿನ್ಹೊ, ರೂಪಾ ಸಂತೋಷ್ ಶೆಟ್ಟಿ, ದಿಲೀಪ್ ಕುಮಾರ್ ಶೆಟ್ಟಿ, ಪದ್ಮಪ್ರಸಾದ್ ಜೈನ್, ವಸೀರ್ ಪುತ್ತಿಗೆ, ಸಲಾಮ್ ಹೊಸಂಗಡಿ, ಜಾವೆದ್ ಹೊಸಂಗಡಿ, ಮರ್ವಿನ್ ಲೋಬೋ, ಮುರಳೀಧರ ಕೋಟ್ಯಾನ್, ಅಬೂಬಕ್ಕರ್ ಶಿರ್ತಾಡಿ, ಆಲ್ವಿನ್ ಮಿನೇಜಸ್, ಆಲ್ವಿನ್ ಡಿಸೋಜ, ಸತೀಶ್ ಕೊಡಂಗಲ್, ಸಂದೀಪ್ ಅಲಂಗಾರ್, ಪ್ರವೀಣ್ ಶೆಟ್ಟಿ ಇದ್ದರು.