ಸಂಪುಟ ವಿಸ್ತರಣೆಯಲ್ಲಿ ಕರಾವಳಿಗೆ ಕೊಕ್!

ರಾಜ್ಯ ರಾಜಕೀಯದಲ್ಲಿ ಕಳೆದ ಕೆಲವು ವಾರಗಳಿಂದ ತೀವ್ರ ಕುತೂಹಲ ಕೆರಳಿಸಿದ್ದ ಕಾಂಗ್ರೆಸ್ ಸರ್ಕಾ
ರಾಜ್ಯ ರಾಜಕೀಯದಲ್ಲಿ ಕಳೆದ ಕೆಲವು ವಾರಗಳಿಂದ ತೀವ್ರ ಕುತೂಹಲ ಕೆರಳಿಸಿದ್ದ ಕಾಂಗ್ರೆಸ್ ಸರ್ಕಾ
Published on

ಮಂಗಳೂರು: ರಾಜ್ಯ ರಾಜಕೀಯದಲ್ಲಿ ಕಳೆದ ಕೆಲವು ವಾರಗಳಿಂದ ತೀವ್ರ ಕುತೂಹಲ ಕೆರಳಿಸಿದ್ದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯ ಅಂತಿಮ ಪಟ್ಟಿ ಹೊರಬಿದ್ದಿದ್ದು, ಕರಾವಳಿ ಭಾಗದ ಕಾಂಗ್ರೆಸ್ ನಾಯಕರಿಗೆ ತೀವ್ರ ಮುಖಭಂಗವಾಗಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಆಕಾಂಕ್ಷಿಗಳನ್ನು ಕಡೆಗಣಿಸಿರುವುದು ಕರಾವಳಿ ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಹಾಗೂ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.

ಸಚಿವ ಸ್ಥಾನಕ್ಕಾಗಿ ಕರಾವಳಿಯ ಪ್ರಮುಖ ನಾಯಕರು ರಾಜಧಾನಿ ದೆಹಲಿವರೆಗೆ ತೆರಳಿ ನಿರಂತರ ಸಭೆ ಹಾಗೂ ತೀವ್ರ ಲಾಬಿ ನಡೆಸಿದ್ದರು. ಪ್ರಾದೇಶಿಕ ಸಮತೋಲನ, ಕರಾವಳಿ ಭಾಗದಲ್ಲಿ ಪಕ್ಷದ ಬಲವರ್ಧನೆ ಹಾಗೂ ಮುಂಬರುವ ರಾಜಕೀಯ ಸವಾಲುಗಳನ್ನು ಎದುರಿಸಲು ಸಚಿವ ಸ್ಥಾನ ಅತ್ಯಗತ್ಯ ಎಂಬ ವಾದವನ್ನು ನಾಯಕರು ಹೈಕಮಾಂಡ್ ಮುಂದಿಟ್ಟಿದ್ದರು. ಆದರೆ, ಅಂತಿಮವಾಗಿ ಪ್ರಕಟಗೊಂಡ 20 ನೂತನ ಸಚಿವರ ಪಟ್ಟಿಯಲ್ಲಿ ಕರಾವಳಿ ಭಾಗದ ಪ್ರಮುಖರ ಹೆಸರುಗಳು ಸಂಪೂರ್ಣವಾಗಿ ಕೈತಪ್ಪಿಹೋಗಿವೆ.
*ನಿರೀಕ್ಷೆಯಲ್ಲಿದ್ದ ಪ್ರಮುಖ ನಾಯಕರು
ಈ ಬಾರಿಯ ಸಂಪುಟ ಸೇರ್ಪಡೆಗೆ ಹಲವು ದಿಗ್ಗಜರ ಹೆಸರುಗಳು ಮುಂಚೂಣಿಯಲ್ಲಿದ್ದವು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಎಂಎಲ್‌ಸಿ ಐವನ್ ಡಿಸೋಜಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತರಾದ ಎಂಎಲ್‌ಸಿ ಮಂಜುನಾಥ ಭಂಡಾರಿ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಪ್ತವಲಯದ ಪುತ್ತೂರು ಶಾಸಕ ಅಶೋಕ್ ರೈ ಅವರ ಹೆಸರುಗಳು ಬಲವಾಗಿ ಕೇಳಿಬಂದಿದ್ದವು. ಆದರೆ, ಹೈಕಮಾಂಡ್ ಸಮೀಕರಣಗಳ ಮುಂದೆ ಈ ನಾಯಕರ ನಿರೀಕ್ಷೆ ಸುಳ್ಳಾಗಿದೆ.
----------------------
ಖಾದರ್ ಸಚಿವಸ್ಥಾನವೇ ಸಣ್ಣ ಸಮಾಧಾನ
ಕರಾವಳಿ ಭಾಗದಿಂದ ಶಾಸಕ ಯು.ಟಿ. ಖಾದರ್ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನಮಾನ ದೊರೆತಿರುವುದು ಈ ವಲಯಕ್ಕೆ ದಕ್ಕಿರುವ ಏಕೈಕ ಸಮಾಧಾನಕರ ಸಂಗತಿಯಾಗಿದೆ. ಹೈಕಮಾಂಡ್ ಪ್ರಾದೇಶಿಕ, ಸಾಮುದಾಯಿಕ ಮತ್ತು ಸಂಘಟನಾತ್ಮಕ ಅಳೆದು-ತೂಗುವಿಕೆಯಲ್ಲಿ ಕರಾವಳಿಯ ಇತರ ನಾಯಕರನ್ನು ಹೊರಗಿಟ್ಟಿರುವುದು ಸ್ಥಳೀಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.
------------------------
ಮಾಜಿ ಉಸ್ತುವಾರಿ ಸಚಿವರಿಗೂ ಕೈತಪ್ಪಿದ ಮಂತ್ರಿಗಿರಿ
ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಲ್ಲಿ ಕರಾವಳಿ ಭಾಗದ ಹಿರಿಯ ಆಕಾಂಕ್ಷಿಗಳನ್ನು ಕಡೆಗಣಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ, ಕಳೆದ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದಿನೇಶ್ ಗುಂಡೂರಾವ್ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೂ ಈ ಬಾರಿ ಸಚಿವ ಸ್ಥಾನ ಸಿಗದಿರುವುದು ಭಾರೀ ಗಮನ ಸೆಳೆದಿದೆ. ಕರಾವಳಿ ಜಿಲ್ಲೆಗಳ ಜವಾಬ್ದಾರಿ ಹೊತ್ತು ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಈ ಇಬ್ಬರೂ ನಾಯಕರು ಸಂಪುಟದಿಂದ ಹೊರಗುಳಿದಿರುವುದು ಕಾರ್ಯಕರ್ತರಲ್ಲಿ ಆಶ್ಚರ್ಯ ಮೂಡಿಸಿದೆ.
----------------------
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net