ಪುತ್ತೂರು: ನಗರ ಭೂ ಸಾರಿಗೆ ನಿರ್ದೇಶನಾಲಯದ (ಡಿಯುಎಲ್ಟಿ) ಮೈಸೂರು ವಿಭಾಗದಿಂದ ಪುತ್ತೂರು ಸೇರಿದಂತೆ ೪ ನಗರಗಳನ್ನು ಸಮಗ್ರ ಸರ್ವೇ ಮತ್ತು ಅಭಿವೃದ್ಧಿ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಯೋಜನೆಯ ಅಂಗವಾಗಿ ನಗರಾಭಿವೃದ್ಧಿ ಮತ್ತು ಸಾರಿಗೆ ಸುಧಾರಣೆ ಕುರಿತು ನಗರಸಭೆ, ಪೊಲೀಸ್ ಇಲಾಖೆ ಹಾಗೂ ಪುತ್ತೂರು ನಗರಾಭಿವೃದ್ಧಿ ಪ್ರಾಽಕಾರದ (ಪುಡಾ) ನೇತೃತ್ವದಲ್ಲಿ ಆನ್ಲೈನ್ ಸಭೆ ನಡೆಯಿತು.
ಪುತ್ತೂರು ಪಟ್ಟಣದ ಸಮಗ್ರ ಸರ್ವೇ ಕಾರ್ಯದ ವ್ಯಾಪ್ತಿ, ನಗರ ಸಾರಿಗೆ ವ್ಯವಸ್ಥೆಯ ಸುಧಾರಣೆ, ಜಂಕ್ಷನ್ ಅಭಿವೃದ್ಧಿ, ಟ್ರಾಫಿಕ್ ನಿರ್ವಹಣೆ ಮತ್ತು ಪಟ್ಟಣದ ಅಭಿವೃದ್ಧಿ ಯೋಜನೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಸರ್ವೇ ಕಾರ್ಯವನ್ನು ಯಶಸ್ವಿಯಾಗಿ ಕೈಗೊಳ್ಳಲು ನಗರಸಭೆ ಮತ್ತು ಟ್ರಾಫಿಕ್ ಪೊಲೀಸ್ ಇಲಾಖೆ ಪೂರ್ಣ ಸಹಕಾರ ನೀಡಬೇಕೆಂದು ಸೂಚಿಸಲಾಯಿತು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ, ಸದಸ್ಯ ಕಾರ್ಯದರ್ಶಿ ಗುರುಪ್ರಸಾದ್, ಸದಸ್ಯರಾದ ಅನ್ವರ್ ಖಾಸಿಂ, ನಿಹಾಲ್ ಶೆಟ್ಟಿ, ನಗರಸಭೆ ಆಯುಕ್ತೆ ವಿದ್ಯಾ ಕಾಳೆ, ಪುತ್ತೂರು ಪೊಲೀಸ್ ಉಪಾಧೀಕ್ಷಕ ಪ್ರಮೋದ್, ಸಂಚಾರ ಠಾಣೆಯ ಉಪನಿರೀಕ್ಷಕ ಸುಹಾಸ್, ಪುತ್ತೂರಿನ ಅಜಯಕೃಷ್ಣ ಉಪ್ಪಂಗಳ ಭಾಗವಹಿಸಿದ್ದರು.
ಪುತ್ತೂರು ನಗರಸಭೆ ವ್ಯಾಪ್ತಿಯ ಎಲ್ಲ ರಸ್ತೆಗಳು ಹಾಗೂ ಅದರ ಸುತ್ತಲಿನ ೩ ಕಿ.ಮೀ. ಬಫರ್ ಪ್ರದೇಶವನ್ನು ಒಳಗೊಂಡಂತೆ ಸಮಗ್ರವಾಗಿ ಸರ್ವೇ ನಡೆಸಲಾಗುತ್ತದೆ. ರಸ್ತೆಗಳ ಅಗಲ, ಕಾಲುದಾರಿಗಳು, ಜಂಕ್ಷನ್ಗಳು, ಟ್ರಾಫಿಕ್, ಪಾರ್ಕಿಂಗ್, ಸಾರ್ವಜನಿಕ ಸಾರಿಗೆ ಮತ್ತು ಪಾದಚಾರಿ ಸೌಲಭ್ಯಗಳ ಅಧ್ಯಯನ ನಡೆಯಲಿದೆ. ರಸ್ತೆಗಳನ್ನು ನಗರ ಯೋಜನಾ ಪ್ರಾಧಿಕಾರದ ಮಾಸ್ಟರ್ ಪ್ಲ್ಯಾನ್ ಪ್ರಸ್ತಾವನೆಗಳೊಂದಿಗೆ ಹೋಲಿಸಿ ಕೊರತೆಯಿರುವ ಸಂಪರ್ಕಗಳು ಮತ್ತು ಸುರಕ್ಷತಾ ಸಮಸ್ಯೆಗಳನ್ನು ಗುರುತಿಸಲಾಗುತ್ತದೆ.