

ಉಳ್ಳಾಲ: ತೊಕ್ಕೊಟ್ಟಿನಲ್ಲಿ ವಾಹನಗಳಿಂದ ಫುಟ್‌ಪಾತ್ ಆಕ್ರಮಣ ಮಾಡಿರುವ ಬಗ್ಗೆ ವಿಜಯವಾಣಿಯಲ್ಲಿ ಪ್ರಕಟಗೊಂಡ ವಿಶೇಷ ವರದಿಗೆ ತುರ್ತಾಗಿ ಸ್ಪಂದಿಸಿರುವ ಪೊಲೀಸ್ ಇಲಾಖೆ ವಾಹನಗಳನ್ನು ತೆರವುಗೊಳಿಸಿದೆ.
ತೊಕ್ಕೊಟ್ಟು ಜಂಕ್ಷನ್‌ನಲ್ಲಿರುವ ಸರ್ವೀಸ್ ರಸ್ತೆ ಅತ್ಯಂತ ಇಕ್ಕಟ್ಟಿನಿಂದ ಕೂಡಿದ್ದರಿಂದ ವಾಹನ ಸಂಚಾರ ಕಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸರು ಇಲ್ಲಿ ಏಕಮುಖ ಸಂಚಾರವಾಗಿ ಬದಲಾಯಿಸಿದ ಬಳಿಕ ತಲಪಾಡಿಯತ್ತ ಸಾಗುವ ವಾಹನಗಳ ಜತೆ ಉಳ್ಳಾಲ, ಕೊಣಾಜೆ ಭಾಗದಿಂದ ಮಂಗಳೂರಿನತ್ತ ಸಾಗುವ ಬಸ್‌ಗಳ ಸಹಿತ ಎಲ್ಲ ವಾಹನ ತೊಕ್ಕೊಟ್ಟು ಜಂಕ್ಷನ್‌ನಿಂದ ಕಾಪಿಕಾಡ್‌ವರೆಗೆ ಸಾಗಿ ಯೂಟರ್ನ್ ಹೊಡೆಯಬೇಕಿದೆ. ಈ ರಸ್ತೆಯ ಎಡಬದಿಯಲ್ಲಿ ಒಳಚರಂಡಿ ಮೇಲೆ ಪಾದಾಚಾರಿಗಳ ಅನುಕೂಲಕ್ಕಾಗಿ ಫುಟ್‌ಪಾತ್ ನಿರ್ಮಿಸಲಾಗಿತ್ತು. ಆದರೆ ಇದು ದ್ವಿಚಕ್ರ ವಾಹನವನ್ನು ಪ್ರತಿದಿನ ಸಾಲಾಗಿ ಪಾರ್ಕ್ ಮಾಡಲಾಗುತ್ತಿತ್ತು. ಇದರಿಂದಾಗಿ ಪಾದಾಚಾರಿಗಳು ಜೀವ ಕೈಯಲ್ಲಿ ಹಿಡಿದು ಸರ್ವೀಸ್ ರಸ್ತೆಯಲ್ಲೇ ನಡೆಯಬೇಕಾದ ದುಸ್ಥಿತಿ ನಿರ್ಮಾಣವಾಗಿತ್ತು.
ಈ ಬಗ್ಗೆ ವಿಜಯವಾಣಿ ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ವರದಿಗಾಗಿ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಕೆ.ರವಿಶಂಕರ್ ಬಳಿ ಮಾತನಾಡಿದಾಗ, ಫುಟ್‌ಪಾತ್‌ನಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ನಿಲ್ಲಿಸಲಾಗಿರುವ ವಾಹನಗಳನ್ನು ಕಟ್ಟುನಿಟ್ಟಾಗಿ ತೆರವುಗೊಳಿಸುವಂತೆ ಮಂಗಳೂರು ದಕ್ಷಿಣ ವಿಭಾಗ ಸಂಚಾರಿ ಠಾಣಾ ನಿರೀಕ್ಷಕರಿಗೆ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಅದರಂತೆ ಫುಟ್‌ಪಾತ್ ಮೇಲೆ ವಾಹನಗಳನ್ನು ತೆರವುಗೊಳಿಸಲಾಗಿದ್ದು, ಪಾದಾಚಾರಿಗಳು ನಿಟ್ಟುಸಿರು ಬಿಡುವಂತಾಗಿದೆ.