

ಮಂಗಳೂರು: ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗಾಗಿ ರಚಿಸಲಾಗಿರುವ ವಿಶೇಷ ತನಿಖಾ ತಂಡದ (ಎಸ್ಐಟಿ) ನೂತನ ಮುಖ್ಯಸ್ಥರಾಗಿ ಬೆಂಗಳೂರಿನ ಸಿಐಡಿ ವಿಭಾಗದ ಐಜಿಪಿ ಚೇತನ್ ಸಿಂಗ್ ರಾಥೋಡ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ.
ಈ ಹಿಂದೆ ಎಸ್ಐಟಿ ಮುಖ್ಯಸ್ಥರಾಗಿದ್ದ ಐಜಿಪಿ ಎನ್. ಶಶಿಕುಮಾರ್ ಅವರು ತಮ್ಮನ್ನು ಈ ಜವಾಬ್ದಾರಿಯಿಂದ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಶುಕ್ರವಾರ ರಾಜ್ಯ ಸರ್ಕಾರ ಚೇತನ್ ಸಿಂಗ್ ಅವರನ್ನು ನೂತನ ಮುಖ್ಯಸ್ಥರನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.
ಸೌಜನ್ಯ ಪ್ರಕರಣದ ತನಿಖೆಯ ಕುರಿತು ಪ್ರಶ್ನೆಗಳನ್ನು ಎತ್ತಿದ್ದ ಕೆಲವರು, ಶಶಿಕುಮಾರ್ ಅವರು ಧರ್ಮಸ್ಥಳ ದೇವಸ್ಥಾನದ ಆಡಳಿತ ಮಂಡಳಿಗೆ ಹತ್ತಿರವಾಗಿದ್ದಾರೆ ಎಂದು ಆರೋಪಿಸಿದ್ದರು. ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಅವಧಿಯಲ್ಲಿಯೂ ಅವರ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡಲಾಗಿತ್ತು.
ಇದಲ್ಲದೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವೆಂಕಟೇಶ್ ಪ್ರಸನ್ನ ಅವರ ಮನವಿಯ ಮೇರೆಗೆ ಅವರನ್ನು ಎಸ್ಐಟಿಯಿಂದ ಬದಲಾಯಿಸಲಾಗಿದೆ. ಅವರ ಸ್ಥಾನಕ್ಕೆ ಹಾಸನದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀನಿಧಿ ಅವರನ್ನು ಎಸ್ಐಟಿ ಸದಸ್ಯರನ್ನಾಗಿ ನೇಮಿಸಲಾಗಿದೆ.
ಎಸ್ಐಟಿಯಲ್ಲಿ ಡಿಐಜಿ ಮಂಗಳೂರು ನಗರ ಪೊಲೀಸ್ ಆಯುಕ್ತ ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ,ಬೆಂಗಳೂರು ಗುಪ್ತಚರ ವಿಭಾಗದ ಎಸ್.ಪಿ. ನಿಶಾ ಜೇಮ್ಸ್ ಮತ್ತು ಬೆಂಗಳೂರಿನ ಸಿಐಡಿ ಎಸ್.ಪಿ. ಲೋಕೇಶ್ ಜಗಲಾಸರ್ ಕೂಡ ಸದಸ್ಯರಾಗಿದ್ದಾರೆ.
ಮುಂದುವರಿದ ವಿಚಾರಣೆ
ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ ನಡೆದ ಸಂದರ್ಭ ತನಿಖಾ ತಂಡದಲ್ಲಿದ್ದ ಎಎಸ್ಐ, ಹೆಡ್ ಕಾನ್ಸ್ಟೇಬಲ್ ಹಾಗೂ ಕಾನ್ಸ್ಟೇಬಲ್ ಹಂತದ ಪೊಲೀಸರನ್ನು ಶುಕ್ರವಾರ ಎಸ್ಐಟಿ ಮಂಗಳೂರು ಕಚೇರಿಯಲ್ಲಿ ಸಿಐಡಿ ಎಸ್.ಪಿ. ಲೋಕೇಶ್ ಜಗಲಾಸರ್ ವಿಚಾರಣೆ ನಡೆಸಿ, ಹೇಳಿಕೆ ದಾಖಲಿಸಿಕೊಂಡರು. ಡಿವೈಎಸ್ಪಿ, ಇನ್ಸ್ಪೆಕ್ಟರ್, ಪಿಎಸ್ಐ ಹಂತದ ಅಧಿಕಾರಿಗಳನ್ನು ಗುರುವಾರ ವಿಚಾರಣೆ ನಡೆಸಲಾಗಿತ್ತು. ಮೂರು ತಿಂಗಳ ಒಳಗೆ ತನಿಖೆ ಪೂರ್ಣಗೊಳಿಸಿ, ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಂಡಿದೆ.