ಭರವಸೆಗೆ ಸೀಮಿತ ಚೆರ್ಕಳ-ಉಕ್ಕಿನಡ್ಕ ರಸ್ತೆ

ಮತ್ತೆ ಹೊಂಡಮಯವಾದ ಅಂತಾರಾಜ್ಯ ಸಂಪರ್ಕ ಮಾರ್ಗ
ಭರವಸೆಗೆ ಸೀಮಿತ ಚೆರ್ಕಳ-ಉಕ್ಕಿನಡ್ಕ ರಸ್ತೆ
Published on: 

ಪುರುಷೋತ್ತಮ ಪೆರ್ಲ ಕಾಸರಗೋಡು

ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ತಿಂಗಳು ಕಳೆದರೂ ಕಾಮಗಾರಿ ಆರಂಭವಾಗಿಲ್ಲ. ತೇಪೆ ಹಾಕಿದ ರಸ್ತೆಯೂ ಮತ್ತೆ ಹೊಂಡಮಯವಾಗಿದೆ. ಇನ್ನೊಂದೆಡೆ, ಸೇತುವೆಯ ಒಂದು ಪಾರ್ಶ್ವ ಕುಸಿಯುವ ಭೀತಿಯಲ್ಲಿದೆ. ಇಂತಹ ದುಸ್ಥಿತಿ ಕಂಡು ಬಂದಿರುವುದು ಚೆರ್ಕಳ-ಕಲ್ಲಡ್ಕ ಅಂತಾರಾಜ್ಯ ಹೆದ್ದಾರಿಯ ಚೆರ್ಕಳದಿಂದ ಉಕ್ಕಿನಡ್ಕದವರೆಗಿನ ರಸ್ತೆಯಲ್ಲಿ.

ಕಳೆದ ಮೂರು-ನಾಲ್ಕು ವರ್ಷಗಳಿಂದ ಹದಗೆಟ್ಟಿರುವ ರಸ್ತೆಯಲ್ಲಿ ಸಂಚರಿಸುವ ವಾಹನ ಚಾಲಕರು ಹಾಗೂ ಪ್ರಯಾಣಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ಬದಲಾದರೂ ರಸ್ತೆ ಅಭಿವೃದ್ಧಿಯಲ್ಲಿ ಬದಲಾವಣೆಯಾಗದಿರುವ ಬಗ್ಗೆ ಜನರು ಅಸವಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಸುವಾರು 30 ಕೋಟಿ ರೂ. ವೆಚ್ಚದಲ್ಲಿ ಚೆರ್ಕಳದಿಂದ ಉಕ್ಕಿನಡ್ಕದವರೆಗಿನ 19 ಕಿ.ಮೀ. ರಸ್ತೆಯ ಮರುಡಾಂಬರೀಕರಣಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ತಿಂಗಳು ಕಳೆದಿದೆ. ಆದರೆ ಟೆಂಡರ್ ಪೂರ್ಣಗೊಂಡ ಒಂದು ತಿಂಗಳೊಳಗೆ ಕಾಮಗಾರಿ ಆರಂಭಿಸುವುದಾಗಿ ಸಂಬಂಧಪಟ್ಟ ಇಲಾಖೆ ನೀಡಿದ್ದ ಭರವಸೆ ಈಡೇರಿಲ್ಲ.

ತೇಪೆ ಕಿತ್ತು ಮತ್ತೆ ಗುಂಡಿ

ರಸ್ತೆಯಲ್ಲಿನ ದೊಡ್ಡ ಹೊಂಡಗಳಿಗೆ ಲೋಕೋಪಯೋಗಿ ಇಲಾಖೆ ಹಾಕಿದ್ದ ಕಾಂಕ್ರೀಟ್ ಮಿಶ್ರಣದ ತೇಪೆ ಕಿತ್ತುಹೋಗಿದ್ದು, ಮತ್ತೆ ಹೊಂಡಗಳು ಕಾಣಿಸಿಕೊಂಡಿವೆ. ಹೊಂಡ ತಪ್ಪಿಸಲು ವಾಹನಗಳು ವಿರುದ್ಧ ದಿಕ್ಕಿನಲ್ಲಿ ಸಂಚರಿಸುವುದರಿಂದ ಅಪಘಾತದ ಸಾಧ್ಯತೆಯೂ ಹೆಚ್ಚಿದೆ. ಮಳೆ ಬಂದರೆ ರಾಡಿಯಾಗುವ ರಸ್ತೆ, ಬಿಸಿಲಿನಲ್ಲಿ ಧೂಳುಮಯವಾಗುತ್ತಿದೆ.

ಕಾಸರಗೋಡು-ಪುತ್ತೂರು ನಡುವೆ ಸಂಚರಿಸುವ ಕೆಎಸ್ಸಾರ್ಟಿಸಿ ಬಸ್‌ಗಳ ಚಾಲಕರು ವೇಳಾಪಟ್ಟಿ ಸರಿಹೊಂದಿಸಲಾಗದೆ ಸಮಸ್ಯೆ ಎದುರಿಸುತ್ತಿದ್ದಾರೆ. ಮಹಿಳೆಯರಿಗೆ ‘ಪ್ರಿಯದರ್ಶಿನಿ’ ಉಚಿತ ಪ್ರಯಾಣ ಯೋಜನೆ ಜಾರಿಯಾದ ಬಳಿಕ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು, ಶಿಥಿಲ ರಸ್ತೆಯಲ್ಲಿ ಸಂಚಾರ ಮತ್ತಷ್ಟು ದುಸ್ತರವಾಗಿದೆ. ಬೈಕ್, ಆಟೋ ಸೇರಿದಂತೆ ಲು ವಾಹನಗಳು ಸಂಚರಿಸಲು ತೊಂದರೆಯಾಗುತ್ತಿದ್ದು, ಬದಲಿ ಹಾದಿ ಕಂಡುಕೊಳ್ಳುತ್ತಿವೆ. ಅತಿಯಾದ ಭಾರ ಹೊತ್ತು ಸಂಚರಿಸುವ ನ ವಾಹನಗಳಿಂದ ರಸ್ತೆಯ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ.

ಬ್ರಿಡ್ಜ್‌ಗೆ ಪಾರ್ಶ್ವ ಕುಸಿಯುವ ಭೀತಿ

ಪಳ್ಳತ್ತಡ್ಕ ಸೇತುವೆಯೂ ಶಿಥಿಲಗೊಂಡಿದ್ದು, ಭಾರಿ ವಾಹನಗಳ ಸಂಚಾರದಿಂದ ಸಮಸ್ಯೆ ಹೆಚ್ಚಾಗಿದೆ. ಸೇತುವೆಯ ಒಂದು ಪಾರ್ಶ್ವ ಕುಸಿಯುವ ಭೀತಿಯಲ್ಲಿದೆ. ತಳಭಾಗದ ಕಾಂಕ್ರೀಟ್ ಕಿತ್ತುಹೋಗುತ್ತಿದ್ದು, ಇಲ್ಲಿ ಹೊಸ ಸೇತುವೆ ನಿರ್ವಾಣ ಅನಿವಾರ್ಯವಾಗಿದೆ. ರಸ್ತೆ ಅಭಿವೃದ್ಧಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಕಾಮಗಾರಿ ಯಾವಾಗ ಆರಂಭವಾಗಲಿದೆ ಎಂಬ ಬಗ್ಗೆ ಶಾಸಕರಿಗೂ ಖಚಿತ ವಾಹಿತಿ ಇಲ್ಲ. ಹೀಗಾಗಿ, ರಸ್ತೆ ಅಭಿವೃದ್ಧಿ ಹಾಗೂ ಸೇತುವೆ ನಿರ್ವಾಣದ ಭರವಸೆ ಕಾರ್ಯರೂಪಕ್ಕೆ ಬರುವುದನ್ನೇ ಸ್ಥಳೀಯರು ಕಾಯುವಂತಾಗಿದೆ.

ಚೆರ್ಕಳ-ಕಲ್ಲಡ್ಕ ರಸ್ತೆ ಅಭಿವೃದ್ಧಿಗೆ ಸರ್ಕಾರ ಮೊದಲ ಆದ್ಯತೆ ನೀಡುತ್ತಿದ್ದು, ಟೆಂಡರ್ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ಅಕ್ಟೋಬರ್ ಅಂತ್ಯದೊಳಗೆ ಕಾಮಗಾರಿ ಆರಂಭಿಸುವುದಾಗಿ ಗುತ್ತಿಗೆದಾರರು ಭರವಸೆ ನೀಡಿದ್ದಾರೆ. ಇದರ ಜತೆಗೆ 12 ಕೋಟಿ ರೂ. ವೆಚ್ಚದಲ್ಲಿ ನೂತನ ಸೇತುವೆ ನಿರ್ವಾಣಕ್ಕೂ ಯೋಜನೆ ಸಲ್ಲಿಸಲಾಗಿದ್ದು, ಮಂಜೂರಾತಿ ದೊರೆಯಲು ಶ್ರಮಿಸಲಾಗುವುದು.
ಕಲ್ಲಟ್ರ ವಾಹಿನ್, ಶಾಸಕ ಕಾಸರಗೋಡು ವಿಧಾನಸಭಾ ಕ್ಷೇತ್ರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net