

ವಿಜಯವಾಣಿ ಸುದ್ದಿಜಾಲ ಕುಂದಾಪುರ
ಸಾಂಸ್ಕೃತಿಕ ಚಟುವಟಿಕೆ, ರಾಜಕೀಯ ಸವಾವೇಶಗಳಿಗೆ, ವ್ಯವಹಾರ ಮೇಳಗಳಿಗೆ ಅನುಕೂಲಕರವಾಗಿರುವ ಕುಂದಾಪುರದ ನೆಹರು ಮೈದಾನ ಕಂಬಳಗದ್ದೆಯಾಗಿ ಮಾರ್ಪಟ್ಟಿದೆ.
ಸುತ್ತಮುತ್ತಲು ಗಿಡಗಂಟಿಗಳು ಬೆಳೆದಿವೆ. ದಶಕಗಳಿಂದ ಅಭಿವೃದ್ಧಿ ಕಾಣದೆ ಸೊರಗುತ್ತಿರುವ ಮೈದಾನದ ಸಂಕಟಕ್ಕೆ ಮುಕ್ತಿ ಯಾವಾಗ ಎಂದು ನಾಗರಿಕರು ಪ್ರಶ್ನಿಸಿದ್ದಾರೆ.
ದಶಕಗಳಿಂದ ಮೈದಾನ ತನ್ನದು ಎಂಬ ವಾದದಲ್ಲಿ ಮುಳುಗಿದ್ದ ಕಂದಾಯ ಮತ್ತು ಪುರಸಭೆ ವರ್ಷದ ಹಿಂದೆ ಗೊಂದಲ ಬಗೆಹರಿಸಿಕೊಂಡಿದ್ದರೂ ಸಮಸ್ಯೆ ಮಾತ್ರ ಪರಿಹಾರ ಕಂಡಿಲ್ಲ. ಸರ್ವೇ ಕಾರ್ಯ ನಡೆಸಿ 1.36 ಎಕರೆ ಜಾಗವನ್ನು ಪುರಸಭೆಗೆ ಕಂದಾಯ ಇಲಾಖೆ ಹಸ್ತಾಂತರಿಸಿದ್ದರೂ ಸ್ಥಿತಿ ಬದಲಾಗಿಲ್ಲ. ಪೊದೆ, ಗಿಡಗಳಿಂದ ಆವೃತಗೊಂಡಿದೆ. ಮದ್ಯವ್ಯಸನಿಗಳು, ನಿರ್ಗತಿಕರು, ವಲಸೆ ಕಾರ್ಮಿಕರ ಬೀಡಾಗಿದೆ. ಬದಿಯಲ್ಲಿರುವ ರಂಗಮಂದಿರ ಪಾಳುಬಿದ್ದಿದ್ದು, ಅನೈತಿಕ ಚಟುವಟಿಕೆಯ ಕೇಂದ್ರವಾಗಿದೆ.
30 ಸಾವಿರಕ್ಕೂ ಮಿಕ್ಕಿ ಜನಸಂಖ್ಯೆಯ ಕುಂದಾಪುರ ನಗರದ ಸಾಂಸ್ಕೃತಿಕ, ಸಮುದಾಯ ಚಟುವಟಿಕೆಗಳಿಗೆ ಮೀಸಲಾಗಿರಬೇಕಾಗಿದ್ದ ಸ್ಥಳ ವಾಹನ ನಿಲುಗಡೆ ಕೇಂದ್ರವಾಗಿ, ತ್ಯಾಜ್ಯ ಬಿಸಾಡುವ ತಾಣವಾಗುತ್ತಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
ಬೇಸಿಗೆಯಲ್ಲಿ ವಾರದ ಕೊನೆಯ ದಿನ ಶನಿವಾರದಂದು ನಡೆಯುವ ಯಕ್ಷಗಾನ ಪ್ರದರ್ಶನಕ್ಕೂ ಮೈದಾನ ಸಿಗುತ್ತಿಲ್ಲ. ಅಕ್ಕಪಕ್ಕದಲ್ಲಿ ವಡೇರಹೋಬಳಿ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಆಶ್ರಮ ಶಾಲೆ, ಬಿಸಿಎಂ ಹಾಸ್ಟೆಲ್, ರೋಟರಿ ಭವನ, ಒಳಾಂಗಣ ಕ್ರೀಡಾಂಗಣವಿದ್ದು, ನೂರಾರು ಮಕ್ಕಳು, ಕ್ರೀಡಾಸಕ್ತರು, ಸಾಂಸ್ಕೃತಿಕ ಪ್ರಿಯರು ಮೈದಾನಕ್ಕೆ ಬಾರದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಏರುತಗ್ಗು, ಕೊಳಚೆ, ಕೆಸರು, ಮದ್ಯದ ಬಾಟಲಿ, ಪ್ಲಾಸ್ಟಿಕ್ ತ್ಯಾಜ್ಯ, ಮಲಮೂತ್ರಾದಿಗಳು ಮೈದಾನವನ್ನು ಆವರಿಸಿಕೊಂಡಿದ್ದು, ವಿದ್ಯಾರ್ಥಿಗಳು ಮೈದಾನಕ್ಕೆ ಹೆಜ್ಜೆ ಇಡಲು ಹಿಂದೇಟು ಹಾಕುತ್ತಿದ್ದಾರೆ.