ಹಳೆಯಂಗಡಿ ಜಂಕ್ಷನ್ ಅವ್ಯವಸ್ಥೆ

ಹೆದ್ದಾರಿ ಕಾಮಗಾರಿಗೆ ಹೊಂಡ ತೋಡಿ ಕಾಣೆಯಾದ ಇಲಾಖೆ
ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿ 66ರ ಜಂಕ್ಷನ್ ಬಳಿ ಸರ್ವೀಸ್ ರಸ್ತೆಗಾಗಿ ಅಗೆದು ಹಾಗೆಯೇ ಬಿಡಲಾಗಿರುವ ಅಪಾಯಕಾರಿ ಹೊಂಡ.
ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿ 66ರ ಜಂಕ್ಷನ್ ಬಳಿ ಸರ್ವೀಸ್ ರಸ್ತೆಗಾಗಿ ಅಗೆದು ಹಾಗೆಯೇ ಬಿಡಲಾಗಿರುವ ಅಪಾಯಕಾರಿ ಹೊಂಡ.
Published on: 

ಭಾಗ್ಯವಾನ್ ಸನಿಲ್ ಮೂಲ್ಕಿ

ಮಂಗಳೂರು- ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಪೇಟೆ ಎದುರಿನ ಜಂಕ್ಷನ್ ಹಲವು ವರ್ಷಗಳಿಂದ ನಿರಂತರ ಅವ್ಯವಸ್ಥೆಗಳ ಆಗರವಾಗಿದ್ದು, ಸಮರ್ಪಕ ಸರ್ವೀಸ್ ರಸ್ತೆ ನಿರ್ಮಾಣವಾಗದೆ ಹೆದ್ದಾರಿ ಸಂಚಾರ ದಿನೇದಿನೆ ಅಪಾಯಕಾರಿಯಾಗಿ ಪರಿಣಮಿಸಿದೆ.

ಜಂಕ್ಷನ್ ಸಮೀಪದ ಕಮಲ್ ಸಂಕೀರ್ಣದ ಮುಂಭಾಗದಲ್ಲಿ ಮಳೆನೀರು ಚರಂಡಿಗಾಗಿ ಹೆದ್ದಾರಿ ಬದಿಯಲ್ಲಿ ಭಾರಿ ಗಾತ್ರದ ಹೊಂಡ ಅಗೆದು ಒಂದು ತಿಂಗಳು ಕಳೆದರೂ ಕಾಮಗಾರಿ ಮುಂದುವರಿದಿಲ್ಲ. ಉದ್ದಕ್ಕೂ ತೆರೆದಿಟ್ಟಿರುವ ಈ ಬೃಹತ್ ಕಂದಕದಿಂದಾಗಿ ರಾತ್ರಿ ವೇಳೆ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದು ಗಾಯಗೊಂಡ ನಿದರ್ಶನಗಳಿವೆ. ಅಲ್ಲದೆ, ಪಕ್ಕದ ವಾಣಿಜ್ಯ ಸಂಕೀರ್ಣದ ಅಂಗಡಿ-ಮುಂಗಟ್ಟುಗಳ ವ್ಯಾಪಾರ ವಹಿವಾಟು ಕುಂಠಿತಗೊಂಡಿದ್ದು, ಗ್ರಾಹಕರು ಹಾಗೂ ವಾಹನಗಳ ಪ್ರವೇಶಕ್ಕೆ ತೀವ್ರ ಅಡ್ಡಿಯುಂಟಾಗಿದೆ ಎಂದು ಸ್ಥಳೀಯರು ಹೆದ್ದಾರಿ ಪ್ರಾಧಿಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಳೆಯಂಗಡಿಯಿಂದ ಕಿನ್ನಿಗೋಳಿ, ಕಟೀಲು, ಮೂಡುಬಿದಿರೆ ಹಾಗೂ ಪಕ್ಷಿಕೆರೆ ಮಾರ್ಗವಾಗಿ ಮಂಗಳೂರು ಸಂಪರ್ಕಿಸುವ ಪ್ರಮುಖ ಜಂಕ್ಷನ್ ಇದಾಗಿದೆ. ನಿತ್ಯ ನೂರಾರು ವಾಹನಗಳು ಸಂಚರಿಸುವ ಈ ಇಕ್ಕಟ್ಟಾದ ತಿರುವಿನಲ್ಲಿ ಹೆದ್ದಾರಿ ದಾಟುವುದೇ ದೊಡ್ಡ ಸವಾಲಾಗಿದೆ. ಜಿಲ್ಲೆಯ ಸಂಸದರು ಮೂಲ್ಕಿ ಮತ್ತು ಹಳೆಯಂಗಡಿ ಭಾಗದಲ್ಲಿ ಕೂಡಲೇ ಸರ್ವೀಸ್ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಹೆದ್ದಾರಿ ಇಲಾಖೆಗೆ ಸ್ಪಷ್ಟ ಸೂಚನೆ ನೀಡಿದ್ದರೂ, ಗುತ್ತಿಗೆ ಸಂಸ್ಥೆಯಾಗಲಿ ಅಥವಾ ಇಲಾಖೆಯಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಮಗಾರಿಯನ್ನು ಅರ್ಧಂಬರ್ಧ ಸ್ಥಿತಿಯಲ್ಲೇ ಬಿಟ್ಟು ಹೋಗಿರುವುದು ಸಾರ್ವಜನಿಕರ ಜೀವಕ್ಕೆ ಸಂಚಕಾರ ತಂದೊಡ್ಡಿದೆ.

ಫ್ಲೈಓವರ್ ನಿರ್ಮಾಣಕ್ಕೆ ಹೆಚ್ಚಿದ ಆಗ್ರಹ

ಸದಾ ವಾಹನ ಹಾಗೂ ಜನದಟ್ಟಣೆಯಿಂದ ಕೂಡಿರುವ ಹಳೆಯಂಗಡಿ ಜಂಕ್ಷನ್‌ನಲ್ಲಿ ಶಾಶ್ವತ ಪರಿಹಾರವಾಗಿ ಫ್ಲೈಓವರ್ ಅಥವಾ ಎಲಿವೇಟೆಡ್ ರಸ್ತೆ ನಿರ್ಮಿಸಬೇಕೆಂಬ ಆಗ್ರಹ ಪ್ರಬಲವಾಗಿದೆ. ಚತುಷ್ಪಥ ರಸ್ತೆ ನಿರ್ಮಾಣದ ಬಳಿಕ ಹಳೆಯಂಗಡಿ, ಪಾವಂಜೆ ಹಾಗೂ ಪಡುಪಣಂಬೂರು ಜಂಕ್ಷನ್‌ಗಳು ನಿರಂತರ ಅಪಘಾತ ವಲಯಗಳಾಗಿ ಮಾರ್ಪಟ್ಟಿವೆ. ಸೂಕ್ತ ಸರ್ವೀಸ್ ರಸ್ತೆಗಳಿಲ್ಲದೆ ಈಗಾಗಲೇ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಹೆದ್ದಾರಿ ಪ್ರಾಧಿಕಾರ ಕೂಡಲೇ ಎಚ್ಚೆತ್ತು ಬಾಕಿ ಉಳಿದಿರುವ ರಸ್ತೆ ಮತ್ತು ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಮಳೆಗಾಲದಲ್ಲಿ ಮಳೆನೀರು ಸರಾಗವಾಗಿ ಹರಿಯದೆ ಸಮಸ್ಯೆಯಾಗುತ್ತಿತ್ತು. ಈಗ ಚರಂಡಿ ನಿರ್ಮಾಣದ ನೆಪದಲ್ಲಿ ಆಳವಾದ ಕಂದಕ ತೋಡಿ ಹೋದವರು ತಿಂಗಳು ಕಳೆದರೂ ಅತ್ತ ಸುಳಿದಿಲ್ಲ. ಇದರಿಂದ ಸಾರ್ವಜನಿಕರು ಹೈರಾಣಾಗಿದ್ದು, ಜನಪ್ರತಿನಿಧಿಗಳು ತಕ್ಷಣ ಮಧ್ಯಪ್ರವೇಶಿಸಿ ಕಾಮಗಾರಿ ಮುಗಿಸಬೇಕು.
ನಿರಂಜನ್ ಸ್ಥಳೀಯರು
ಹಳೆಯಂಗಡಿ ಜಂಕ್ಷನ್ ಮಂಗಳೂರು-ಉಡುಪಿ ಹೆದ್ದಾರಿ ಸಂಪರ್ಕದ ಜತೆಗೆ ಕಿನ್ನಿಗೋಳಿಪಕ್ಷಿಕೆರೆ ಭಾಗಕ್ಕೆ ತೆರಳುವ ಪ್ರಮುಖ ಕವಲು ದಾರಿ. ಇಲ್ಲಿ ಸಂಭವಿಸುವ ಸರಣಿ ಅಪಘಾತಗಳನ್ನು ತಡೆಯಲು ಪೂರ್ಣಪ್ರಮಾಣದ ಸರ್ವೀಸ್ ರಸ್ತೆ ಮತ್ತು ಮೇಲ್ಸೇತುವೆ (ಫ್ಲೈಓವರ್) ಅತ್ಯಗತ್ಯ.
ಧರ್ಮಾನಂದ ಶೆಟ್ಟಿಗಾರ್, ಮೆಸ್ಕಾಂ ಸಲಹಾ ಸಮಿತಿ ಸದಸ್ಯ