ಕುಡುಪು ಕ್ಷೇತ್ರದಲ್ಲಿ ಚಂಪಾ ಷಷ್ಠಿ ಬ್ರಹ್ಮ ರಥೋತ್ಸವ

ಕುಡುಪು ಕ್ಷೇತ್ರದಲ್ಲಿ ಚಂಪಾ ಷಷ್ಠಿ ಬ್ರಹ್ಮ ರಥೋತ್ಸವ
ಕುಡುಪು ಕ್ಷೇತ್ರದಲ್ಲಿ ಚಂಪಾ ಷಷ್ಠಿ ಬ್ರಹ್ಮ ರಥೋತ್ಸವ
Published on
ಮಂಗಳೂರು: ದಕ್ಷಿಣ ಭಾರತದ ಪ್ರಸಿದ್ಧ ನಾಗರಾಧನ ಕ್ಷೇತ್ರ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮ ಸಡಗರದ ಚಂಪಾ ಷಷ್ಠಿ ಬ್ರಹ್ಮರಥೋತ್ಸವ ಬುಧವಾರ ವೈಭವದಿಂದ ಜರಗಿತು.
ಮುಂಜಾನೆ ಅನ್ನ ಛತ್ರದಲ್ಲಿ ಕೊಪ್ಪರಿಗೆ ಮಹೂರ್ತ ಪ್ರಾರ್ಥನೆ ನಡೆದು ಬಳಿಕ ಶ್ರೀ ಅನಂತಪದ್ಮನಾಭ ದೇವರಿಗೆ ಉಷಾ ಕಾಲದ ಪೂಜೆ, ವಿಶೇಷ ಪಂಚಾಮೃತ ಅಭಿಷೇಕ, ನವಕ ಕಲಶಾಭಿಷೇಕ, ನವಕ ಪ್ರಧಾನ ಹೋಮ ಹಾಗೂ ಬ್ರಹ್ಮ ರಥದ ರಥ ಕಲಶ ನಡೆಯಿತು. ಶ್ರೀ ಅನಂತಪದ್ಮನಾಭ ದೇವರಿಗೆ ವಿಶೇಷವಾದ ಅರ್ಚನೆ, ಸಹಸ್ರ ನಾಮ ಅರ್ಚನೆ, ಅಷ್ಟೋತ್ತರ ಅರ್ಚನೆ ಸೇವೆಗಳು, ಹಾಲು ಪಾಯಸ ಸೇವೆಗಳು ನಡೆದ ಬಳಿಕ ಶ್ರೀ ದೇವರಿಗೆ ವಿಶೇಷ ಹರಿವಾಣ ನೈವೇದ್ಯ ಸಮರ್ಪಣೆಗೊಂಡಿತು. ನಂತರ ಷಷ್ಠಿ ಉತ್ಸವದ ವಿಶೇಷ ಮಹಾ ನೈವೇದ್ಯ ಅರ್ಪಣೆಗೊಂಡ ಬಳಿಕ ಸರ್ವಾಭರಣ ಭೂಷಿತ ಶ್ರೀ ಅನಂತಪದ್ಮನಾಭ ದೇವರಿಗೆ ಷಷ್ಠಿಯ ಮಧ್ಯಾಹ್ನದ ಮಹಾಪೂಜೆ ವೈಭವದಿಂದ ನಡೆಯಿತು.
ಮಧ್ಯಾಹ್ನ 12 ಗಂಟೆಗೆ ಶ್ರೀ ದೇವರ ಬಲಿ ಹೊರಟು ರಾಜಾಂಗಣದಲ್ಲಿ ಶ್ರೀ ದೇವರಿಗೆ ವಾದ್ಯ ಸುತ್ತು ಸರ್ವ ವಾದ್ಯ ಸುತ್ತು ಸೇವೆಗಳು ನಡೆದ ಬಳಿಕ ಶ್ರೀ ಅನಂತ ಪದ್ಮನಾಭ ದೇವರ ವೈಭವದ ಬ್ರಹ್ಮ ರಥಾರೋಹಣ ನಡೆಯಿತು. ಬಳಿಕ ಭಕ್ತರಿಂದ ಬ್ರಹ್ಮರಥಕ್ಕೆ ವಿಶೇಷವಾದ ತೆಂಗಿನಕಾಯಿ ಒಡೆಯುವ ಸೇವೆಯಾಗಿ ಬ್ರಹ್ಮರಥದಲ್ಲಿ ಶ್ರೀ ದೇವರಿಗೆ ವಿಶೇಷ ಮಹಾಪೂಜೆ ನಡೆಯಿತು.
ಮಹಾ ಅನ್ನಸಂತರ್ಪಣೆಯ ಕಾರ್ಯಕ್ರಮದಲ್ಲಿ 25 ಸಹಸ್ರಕ್ಕೂ ಮಿಕ್ಕಿ ಭಕ್ತರು ಶ್ರೀ ದೇವರ ವಿಶೇಷ ಅನ್ನಪ್ರಸಾದ ಸ್ವೀಕರಿಸಿದರು. ಭಕ್ತರಿಂದ ಶ್ರೀ ದೇವರಿಗೆ 22000 ತಂಬಿಲ, 6000 ಪಂಚಾಮೃತ ಅಭಿಷೇಕ, 30,000 ಸೀಯಾಳ ಅರ್ಪಣೆಗೊಂಡಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಮಿತ್ರರು ಕುಡುಪು ಹಾಗೂ ದೇವಳದ ಆಡಳಿತ ಮಂಡಳಿಯ ವತಿಯಿಂದ ಬಪ್ಪನಾಡು ಮೇಳದವರಿಂದ ಬಪ್ಪನಾಡು ಕ್ಷೇತ್ರ ಮಹಾತ್ಮೆ ಬಯಲಾಟ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net