ಮಣ್ಣಗುಡ್ಡೆ ಶತಮಾನದಷ್ಟು ಹಳೇ ಸೂಟರ್ ಹಾಸ್ಟೆಲ್ ಕಟ್ಟಡ ನೆಲಸಮ

ಪಾರಂಪರಿಕ ತಾಣವಾಗಿ ಉಳಿಸಬೇಕಾಗಿದ್ದ ಐತಿಹಾಸಿಕ ಕುರುಹು ಇದೀಗ ಅವಶೇಷ
ನೆಲಸಮಗೊಂಡ  ಶತಮಾನದಷ್ಟು ಹಳೇ ಸೂಟರ್ ಹಾಸ್ಟೆಲ್ ಕಟ್ಟಡ.
ನೆಲಸಮಗೊಂಡ ಶತಮಾನದಷ್ಟು ಹಳೇ ಸೂಟರ್ ಹಾಸ್ಟೆಲ್ ಕಟ್ಟಡ.
Published on: 

ಮಂಗಳೂರು: ನಗರದ ಮಣ್ಣಗುಡ್ಡೆಯಲ್ಲಿರುವ ಗೋಕರ್ಣನಾಥೇಶ್ವರ ಕಾಲೇಜಿನ ಆವರಣದಲ್ಲಿದ್ದ ಶತಮಾನ ಕಂಡ ಸೂಟರ್ ಹಾಸ್ಟೆಲ್ ಪಾರಂಪರಿಕ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ.

ಪಾರಂಪರಿಕ ತಾಣವಾಗಿ ಉಳಿಸಬೇಕಾಗಿದ್ದ ಐತಿಹಾಸಿಕ ಕುರುಹು ಇದೀಗ ಅವಶೇಷವಾಗಿ ಉಳಿದಿದೆ. ಬ್ರಿಟಿಷರ ಅವಧಿಯ ಈ ಹಾಸ್ಟೆಲ್ 70ರ ದಶಕದಿಂದ ಕಾರ್ಯನಿರ್ವಹಿಸುತ್ತಿರಲಿಲ್ಲ. ಆದರೆ ಆ ಭವ್ಯ ಕಟ್ಟಡವು ಗತಕಾಲದ ವೈಭವಕ್ಕೆ ಮೂಕ ಸಾಕ್ಷಿಯಾಗಿತ್ತು. ಕುಂದಾಪುರದಿಂದ ಕಾಸರಗೋಡು ಅಥವಾ ಬೆಳ್ತಂಗಡಿವರೆಗಿನ ದೂರದ ಊರುಗಳಿಂದ ಮಂಗಳೂರಿಗೆ ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದ ನೂರಾರು ಬಿಲ್ಲವ ಯುವಕರಿಗೆ ಆಶ್ರಯ ಮತ್ತು ಸರ್ವತೋಮುಖ ಪೋಷಣೆ ನೀಡಲು 1926ರಲ್ಲಿ ಸೂಟರ್ ಹೆಸರಲ್ಲಿ ಈ ಹಾಸ್ಟೆಲ್ ನಿರ್ಮಾಣವಾಗಿತ್ತು.

ಶ್ರೀ ವೆಂಕಟೇಶ್ವರ ಶಿವಭಕ್ತಿ ಯೋಗ ಸಂಘದ ಸಂಸ್ಥಾಪಕ ಅಧ್ಯಕ್ಷ ಸೌಕಾರ್ ಧೂಮಪ್ಪ ಕಾಂಟ್ರಾಕ್ಟರ್ ಅವರ ವಂಶಸ್ಥರು ಈ ಪಾರಂಪರಿಕ ಕಟ್ಟಡದ ಧ್ವಂಸದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಸಂಘದ ಆಡಳಿತ ಮಂಡಳಿಯು ಹಳೇ ಕಟ್ಟಡವನ್ನು ಪುನಃಸ್ಥಾಪಿಸಿ, ಸಂಸ್ಥಾಪಕರು ಮತ್ತು ಸಂಸ್ಥಾಪಕ ಪಿತಾಮಹರ ಹೆಸರಿನಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಬಳಸಿದ್ದರೆ ಅದೊಂದು ಸೂಕ್ತ ಗೌರವವಾಗುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ನೂರು ವರ್ಷಗಳ ಹಿಂದೆ ಸೂಟರ್ ಹಾಸ್ಟೆಲ್ ಸ್ಥಾಪನೆಯ ಕನಸು ಕಂಡ ಹತ್ತು ಟ್ರಸ್ಟಿಗಳ ಗೌರವಾರ್ಥವಾಗಿ ಯಾವುದಾದರೂ ಸಾರ್ವಜನಿಕ ಬಳಕೆಯ ಸಂಸ್ಥೆಯನ್ನು ಪುನರ್ ನಿರ್ಮಿಸುವಂತೆ ಆಡಳಿತ ಮಂಡಳಿಯನ್ನು ಧೂಮಪ್ಪ ಕಾಂಟ್ರಾಕ್ಟರ್ ಅವರ ಮೊಮ್ಮಕ್ಕಳಾದ ನರೇಂದ್ರ ಕುಮಾರ್ ಮತ್ತು ವಾಣಿ ಭವಿಶಿ ಅವರು ಒತ್ತಾಯಿಸಿದ್ದಾರೆ.

ಸೂಟರ್ ಹಾಸ್ಟೆಲ್‌ಗಾಗಿ ಜಮೀನನ್ನು ಅಂದಿನ ಕಲೆಕ್ಟರ್ ಸಿ. ಎಸ್. ಸೂಟರ್ ಅವರು ಮಂಜೂರು ಮಾಡಿದ್ದರು ಮತ್ತು ಅದು ಧೂಮಪ್ಪ ಕಾಂಟ್ರಾಕ್ಟರ್ ಅವರ ಪತ್ನಿ ಕಮಲಾ ಬಾಯಿ ಅವರ ಹೆಸರಿನಲ್ಲಿ ನೋಂದಾಯಿಸಲಾಗಿತ್ತು. ಅಧಿಕೃತ ದಾಖಲೆಗಳು ಇನ್ನೂ ಅವರ ಹೆಸರಿನಲ್ಲಿಯೇ ಇದ್ದರೂ, ಕುಟುಂಬವು ಆ ಆಸ್ತಿಯ ಮೇಲೆ ಯಾವುದೇ ಹಕ್ಕು ಮಂಡಿಸಿಲ್ಲ.

‘ಕಟ್ಟಡ ಮತ್ತು ಅದರ ಪಕ್ಕದ ಕಟ್ಟಡವನ್ನು ಕೆಡವಿ ಸಾರ್ವಜನಿಕ ಬಳಕೆಗೆ ಫೂರಕವಾಗಿ ಏನಾದರೂ ನಿರ್ಮಿಸಲು ನಾವು ನಿರ್ಧರಿಸಿದ್ದೇವೆ. ಸಂಘದ ಸಂಸ್ಥಾಪಕ ಪಿತಾಮಹರ ಕೊಡುಗೆಗಳನ್ನು ಸೂಕ್ತವಾಗಿ ಸ್ಮರಿಸಲಾಗುವುದು’ ಎಂದು ಶ್ರೀ ವೆಂಕಟೇಶ್ವರ ಶಿವಭಕ್ತಿ ಯೋಗ ಸಂಘದ ಉಪಾಧ್ಯಕ್ಷ ಡಾ.ಬಿ. ಜಿ. ಸುವರ್ಣ ತಿಳಿಸಿದ್ದಾರೆ.