15 ಅಡಿ ಕಂದಕಕ್ಕೆ ಉರುಳಿದ ಕಾರು

ಬೆಳಗಾವಿ ಮೂಲದ ಐವರಿಗೆ ಗಾಯ
ಕಂದಕಕ್ಕೆ ಉರುಳಿ ಬಿದ್ದು ನಜ್ಜುಗುಜ್ಜಾಗಿರುವ ಕಾರು.
ಕಂದಕಕ್ಕೆ ಉರುಳಿ ಬಿದ್ದು ನಜ್ಜುಗುಜ್ಜಾಗಿರುವ ಕಾರು.
Published on: 

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ 73ರ ಕಲ್ಮಂಜ ಗ್ರಾಮದ ನಿಡಿಗಲ್ ಎಂಬಲ್ಲಿ ಕಾರು ರಸ್ತೆ ಬದಿಯ 15 ಅಡಿ ಆಳದ ಕಂದಕಕ್ಕೆ ಬುಡಮೇಲಾಗಿ ಉರುಳಿದ ಘಟನೆ ಗುರುವಾರ ಮುಂಜಾನೆ ಸಂಭವಿಸಿದೆ.

ಕಾರಿನಲ್ಲಿದ್ದ ಆರು ಮಂದಿಯ ಪೈಕಿ ಐವರು ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗಾವಿ ಮೂಲದ ವಿನಾಯಕ(48), ರಾಜೇಶ್(45), ಈಶ್ವರ್(48), ಗೋಪಾಲ್ ಗಂಗಾರಾಮ್ ಧಾಗೆ(51) ಹಾಗೂ ಶಿವಾನಂದ (42) ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಳಗಾವಿ ಮೂಲದ ಕಾರು ಚಾರ್ಮಾಡಿ ಕಡೆಯಿಂದ ಉಜಿರೆ ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿತ್ತು. ಈ ವೇಳೆ ನಿಡಿಗಲ್ ಸಮೀಪ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ತೀರ ಬಲಭಾಗಕ್ಕೆ ಚಲಿಸಿ, ರಸ್ತೆ ಬದಿಯಲ್ಲಿದ್ದ ಸುಮಾರು 15 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ಸ್ಥಳೀಯರು ನೆರವಿಗೆ ಧಾವಿಸಿ ಗಾಯಾಳುಗಳನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದ್ದಾರೆ. ಚಾಲಕನ ನಿದ್ದೆಯ ಮಂಪರು ಕಾರಣವೆಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಅಪಘಾತ ನಡೆದ ಸ್ಥಳದಲ್ಲಿ ರಾ.ಹೆ. ಕಾಮಗಾರಿ ನಡೆಯುತ್ತಿದ್ದು ರಸ್ತೆ ಬದಿಯಲ್ಲಿ ಆಳ ಕಂದಕವಿದೆ. ಆದರೆ ಕಂದಕವಿರುವ ಅಪಾಯಕಾರಿ ಪ್ರದೇಶದಲ್ಲಿ ವಾಹನಗಳು ರಸ್ತೆ ಬಿಟ್ಟು ಕೆಳಕ್ಕೆ ಉರುಳದಂತೆ ತಡೆಬೇಲಿ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿಲ್ಲ.