ಅಪಘಾತ ಸಾಬೀತು ಕಾರು ಚಾಲಕನಿಗೆ ಒಂದೂವರೆ ತಿಂಗಳು ಜೈಲು

 ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಂಗಳೂರು: ರಸ್ತೆ ಅಪಘಾತದಲ್ಲಿ ಪಾದಚಾರಿ ಸಾವಿಗೆ ಕಾರಣನಾಗಿ, ಪೊಲೀಸರಿಗೂ ಮಾಹಿತಿ ನೀಡದೆ ಸ್ಥಳದಿಂದ ಪರಾರಿಯಾಗಿದ್ದ ಕಾರು ಚಾಲಕನಿಗೆ ನ್ಯಾಯಾಲಯ ಒಂದೂವರೆ ತಿಂಗಳ ಜೈಲು ಶಿಕ್ಷೆ, 8 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಗುರುಪ್ರಸಾದ್ ಎಂ.ಆರ್. ಶಿಕ್ಷೆಗೊಳಗಾದ ಕಾರು ಚಾಲಕ. ತಪನ್ ಚೌಧರಿ (27) ಮೃತಪಟ್ಟ ಪಾದಚಾರಿ.
2024ರ ಎ.28ರಂದು ಬೆಳಗ್ಗೆ11 ಗಂಟೆಯ ವೇಳೆಗೆ ಕುಂಟಿಕಾನ ಬಳಿಯ ಬಾರೆಬೈಲು ಕ್ರಾಸ್ ಬಳಿ ರಾ.ಹೆ. 66ನ್ನು ತಪನ್ ಮತ್ತು ಅವರ ಸ್ನೇಹಿತ ದಾಟುತ್ತಿದ್ದ ವೇಳೆ ಕೆ.ಪಿ.ಟಿ.ಯಿಂದ ಕೊಟ್ಟಾರ ಕಡೆಗೆ ವೇಗವಾಗಿ ಸಾಗಿ ಬಂದ ಕಾರು ತಪನ್ ಅವರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಡಾಮರು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡ ತಪನ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಅಪಘಾತಕ್ಕೆ ಕಾರಣನಾದ ಕಾರು ಚಾಲಕ ಗುರುಪ್ರಸಾದ್ ಆಸ್ಪತ್ರೆಗೆ ಸಾಗಿಸದೆ ಸ್ಥಳದಿಂದ ಕಾರಿನೊಂದಿಗೆ ಪರಾರಿಯಾಗಿದ್ದ. ಈ ಬಗ್ಗೆ ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ವೇಳೆ ಅಪಘಾತಕ್ಕೆ ಕಾರಣವಾದ ಕಾರಿಗೆ ವಾಯುಮಾಲಿನ್ಯ ದೃಢೀಕರಣ ಮಾಡಿಸಿರಲಿಲ್ಲ ಎಂದು ತಿಳಿದು ಬಂದಿದೆ. ಅದರಂತೆ ಆಗಿನ ಕದ್ರಿ ಠಾಣಾ ಪೊಲೀಸ್ ನಿರೀಕ್ಷಕ ಇ.ಆನಂದ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜೆಎಂಎಫ್ ಸಿ 8ನೇ ನ್ಯಾಯಾಲಯದ ನ್ಯಾಯಾಧೀಶರಾದ ಫವಾಜ್ ಪಿ.ಎ. ಅವರು, ಗುರುಪ್ರಸಾದ್ ನ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಒಂದೂವರೆ ತಿಂಗಳ ಜೈಲು ಶಿಕ್ಷೆ, 8 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಆರೋನ್ ಡಿಸೋಜ ವಿಟ್ಲ ಅವರು ಸಾಕ್ಷಿ ವಿಚಾರಣೆ ನಡೆಸಿ, ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net