ಅಡಿಕೆ ಕೃಷಿಕರ ಸಂಕಷ್ಟ ಕೇಂದ್ರ ಸಚಿವರಿಗೆ ಕ್ಯಾಂಪ್ಕೊ ನಿಯೋಗ ಮನವರಿಕೆ

  ಕ್ಯಾಂಪ್ಕೋ ನಿಯೋಗ ಸಹಕಾರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು. ವಿಶ್ವೇಶ್ವರ ಹೆಗಡೆ ಕಾಗೇರಿ, ಬಿ.ವೈ. ರಾಘವೇಂದ್ರ,  ಕೋಟ ಶ್ರೀನಿವಾಸ ಪೂಜಾರಿ,ಆರಗ ಜ್ಞಾನೇಂದ್ರ,ಎಸ್.ಆರ್. ಸತೀಶ್ಚಂದ್ರ ಹಾಗೂ ಡಾ. ಬಿ.ವಿ. ಸತ್ಯನಾರಾಯಣ ನಿಯೋಗದಲ್ಲಿದ್ದರು.
ಕ್ಯಾಂಪ್ಕೋ ನಿಯೋಗ ಸಹಕಾರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು. ವಿಶ್ವೇಶ್ವರ ಹೆಗಡೆ ಕಾಗೇರಿ, ಬಿ.ವೈ. ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ,ಆರಗ ಜ್ಞಾನೇಂದ್ರ,ಎಸ್.ಆರ್. ಸತೀಶ್ಚಂದ್ರ ಹಾಗೂ ಡಾ. ಬಿ.ವಿ. ಸತ್ಯನಾರಾಯಣ ನಿಯೋಗದಲ್ಲಿದ್ದರು.
Published on

ಮಂಗಳೂರು: ಅಡಿಕೆ ಬೆಳೆಗಾರರು ಮತ್ತು ಸಹಕಾರ ಸಂಘಗಳು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ದೃಢ ಸಂಕಲ್ಪದೊಂದಿಗೆ, ಉನ್ನತ ಮಟ್ಟದ ಗಣ್ಯರ ನಿಯೋಗವೊಂದು ನವದೆಹಲಿಯಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಫಲಪ್ರದ ಚರ್ಚೆ ನಡೆಸಿತು.

ನಿಯೋಗದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿ.ವೈ. ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಅಡಿಕೆ ಮಹಾಮಂಡಲದ ಅಧ್ಯಕ್ಷ ಆರಗ ಜ್ಞಾನೇಂದ್ರ, ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಹಾಗೂ ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ. ಸತ್ಯನಾರಾಯಣ ಅವರು ಪಾಲ್ಗೊಂಡಿದ್ದರು.
ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ನಿಯೋಗವು, ಅಡಿಕೆ ವಲಯ ಇಂದು ಎದುರಿಸುತ್ತಿರುವ ಗಂಭೀರ ಸವಾಲುಗಳನ್ನು ವಿವರಿಸಿತು.
ಅಕ್ರಮ ಆಮದಿಗೆ ಕಡಿವಾಣ: ವಿವಿಧ ಎಚ್‌ಎಸ್ ಕೋಡ್‌ಗಳ ಮರೆಯಲ್ಲಿ ನಡೆಯುತ್ತಿರುವ ಅಡಿಕೆಯ ಅಕ್ರಮ ಆಮದು, ಹಾಗೂ ಕಳೆದ ಅಕ್ಟೋಬರ್‌ನಿಂದ ’ಹುರಿದ ಅಡಿಕೆ’ ಎಂಬ ನೂತನ ವರ್ಗೀಕರಣದ ನೆಪದಲ್ಲಿ ದೇಶದೊಳಗೆ ನುಸುಳುತ್ತಿರುವ ಕಳಪೆ ಗುಣಮಟ್ಟದ ಅಡಿಕೆಯ ಬಗ್ಗೆ ಸಚಿವರ ಗಮನ ಸೆಳೆಯಲಾಯಿತು.
ಧಾರಣೆ ಕುಸಿತದ ಆತಂಕ: ಕನಿಷ್ಠ ಆಮದು ಬೆಲೆ ನಿಯಮಗಳನ್ನು ಗಾಳಿಗೆ ತೂರಿ, ಸುಂಕ ರಹಿತವಾಗಿ ಅಗ್ಗದ ದರದಲ್ಲಿ ವಿದೇಶಿ ಅಡಿಕೆ ದೇಶೀಯ ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವುದರಿಂದ, ಅಡಿಕೆ ಧಾರಣೆಯಲ್ಲಿ ಉಂಟಾಗಿರುವ ದಿಢೀರ್ ಕುಸಿತದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಲಾಯಿತು.
’ಒಂದು ದೇಶ, ಒಂದು ತೆರಿಗೆ’ ಜಾರಿ: ಖಾಸಗಿ ವ್ಯಾಪಾರಿಗಳು ತೆರಿಗೆ ವಂಚಿಸುತ್ತಿರುವಾಗ, ಪ್ರಾಮಾಣಿಕವಾಗಿ ವಹಿವಾಟು ನಡೆಸುವ ಸಹಕಾರ ಸಂಘಗಳ ಮೇಲೆ ಬೀಳುತ್ತಿರುವ ಅನಗತ್ಯ ತೆರಿಗೆ ಹೊರೆಯನ್ನು ತಪ್ಪಿಸಲು, ’ಒಂದು ದೇಶ ಒಂದು ತೆರಿಗೆ’ ನೀತಿಯನ್ನು ಜಾರಿಗೊಳಿಸುವ ತುರ್ತು ಅಗತ್ಯವನ್ನು ಕ್ಯಾಂಪ್ಕೊ ಅಧ್ಯಕ್ಷರು ಮಂಡಿಸಿದರು.
ನಿಯೋಗದ ಮನವಿಗೆ ಸ್ಪಂದಿಸಿದ ಅಮಿತ್ ಶಾ ಅವರು, ಈ ಅಕ್ರಮಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಅಲ್ಲದೆ, ಸಹಕಾರ ಕ್ಷೇತ್ರ ಹಾಗೂ ಅದರ ಸದಸ್ಯರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದರು.
ಬಳಿಕ ನಿಯೋಗವು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ, ರೈತರು ಎದುರಿಸುತ್ತಿರುವ ತೆರಿಗೆಯ ಹೊರೆಯ ಬಗ್ಗೆ ಮನವರಿಕೆ ಮಾಡಿಕೊಟ್ಟಿತು.
ಮೈಲುತುತ್ತದ ಮೇಲಿನ ವಿಪರೀತ ಜಿಎಸ್‌ಟಿ: ಅಡಿಕೆ ತೋಟಗಳಿಗೆ ಬೋರ್ಡೋ ದ್ರಾವಣದಲ್ಲಿ ಬಳಸಲಾಗುವ ಮೈಲುತುತ್ತದ ಮೇಲಿನ ಜಿಎಸ್‌ಟಿ ತಾರತಮ್ಯವನ್ನು ನಿಯೋಗವು ಸಚಿವರ ಗಮನಕ್ಕೆ ತಂದಿತು. ಮೈಲುತುತ್ತವನ್ನು ‘ಸೂಕ್ಷ್ಮ ಪೋಷಕಾಂಶ’ವಾಗಿ ಬಳಸಿದಾಗ ಕೇವಲ ಶೇ.5 ಜಿಎಸ್‌ಟಿ ಇದ್ದರೆ, ಅದೇ ರೈತರು ಅದನ್ನು ‘ಶಿಲೀಂಧ್ರನಾಶಕ’ವಾಗಿ ಬಳಸುವಾಗ ಬರೋಬ್ಬರಿ ಶೇ.18 ಜಿಎಸ್‌ಟಿ ಪಾವತಿಸಬೇಕಾದ ಈ ಅನ್ಯಾಯವನ್ನು ನಿವಾರಿಸಬೇಕೆಂದು ಒತ್ತಾಯಿಸಲಾಯಿತು.
ವಿಷಯವನ್ನು ಆಲಿಸಿದ ನಿರ್ಮಲಾ ಸೀತಾರಾಮನ್ ಅವರು, ಅಕ್ರಮ ಮಾರ್ಗಗಳ ಮೂಲಕ ನಡೆಯುತ್ತಿರುವ ಆಮದಿನ ಮೇಲೆ ಈಗಾಗಲೇ ಹದ್ದಿನ ಕಣ್ಣಿಡಲಾಗಿದ್ದು, ಕಟ್ಟುನಿಟ್ಟಿನ ನಿಗಾ ವಹಿಸುವಂತೆ ಎಲ್ಲಾ ಬಂದರುಗಳಿಗೆ ಕಟ್ಟೆಚ್ಚರದ ಸೂಚನೆ ನೀಡಲಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net