ನಾರಾಯಣಗುರುಗಳ ಆದರ್ಶ ಪಾಲನೆಯಿಂದ ಸಮೃದ್ಧ ಸಮಾಜ ನಿರ್ಮಾಣ ಸಾಧ್ಯ
ಶ್ರೀ ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆಗಳ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮ ದಿನಾಚರಣೆ ಹಾಗೂ ಸಂಸ್ಥೆಯ ಸ್ಥಾಪಕರ ದಿನಾಚರಣೆ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು.
Published on:
Copied
Follow Us
ಮಂಗಳೂರು: ಶ್ರೀ ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆಗಳ ವತಿಯಿಂದ ಗಾಂಧಿನಗರದ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮ ದಿನಾಚರಣೆ ಹಾಗೂ ಸಂಸ್ಥೆಯ ಸ್ಥಾಪಕರ ದಿನಾಚರಣೆ ಕಾರ್ಯಕ್ರಮವು ಅತ್ಯಂತ ಶ್ರದ್ಧಾ-ಭಕ್ತಿಯಿಂದ ವಿಜೃಂಭಣೆಯಿಂದ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡೈಜಿವರ್ಲ್ಡ್ ಮಾಧ್ಯಮ ಸಂಸ್ಥೆಯ ಸ್ಥಾಪಕರಾದ ವಾಲ್ಟರ್ ನಂದಳಿಕೆ, ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದುದ್ದಕ್ಕೂ ಪಾಲಿಸುವ ಅವಶ್ಯಕತೆ ಇದೆ. ಸಂಘಟನೆಯ ಮೂಲಕ ಬಲಶಾಲಿಯಾಗುವುದು ಹಾಗೂ ಕೈಗಾರಿಕೆ, ಉದ್ದಿಮೆಗಳ ಮೂಲಕ ಆರ್ಥಿಕ ಅಭಿವೃದ್ಧಿ ಸಾಧಿಸುವುದು ಗುರುಗಳ ಮುಖ್ಯ ಸಂದೇಶವಾಗಿತ್ತು. ಇಂತಹ ಮಹಾನ್ ಚೇತನದ ವಿಚಾರಗಳನ್ನು ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿ ಯುವಜನತೆ ಅರಿತುಕೊಂಡು ಜೀವನದಲ್ಲಿ ಮುನ್ನಡೆಯುವುದು ಅಗತ್ಯವಾಗಿದೆ ಎಂದರು.
ಮುಕ್ಕ ಶ್ರೀನಿವಾಸ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಶಶಿಧರ್ ಕೋಟ್ಯಾನ್ ಮಾತನಾಡಿ, ನಾರಾಯಣ ಗುರುಗಳು ಪ್ರಾಚೀನ ಮೌಲ್ಯಾದರ್ಶಗಳನ್ನು ಹಾಗೂ ಸತ್ಯವನ್ನು ಅರಸಿಕೊಂಡು ಮನೆ-ಮಠ ತ್ಯಜಿಸಿ ಗಿರಿ, ಬೆಟ್ಟ, ದಟ್ಟಾರಣ್ಯ ಹಾಗೂ ಗುಹೆಗಳಲ್ಲಿ ಸುದೀರ್ಘ ವರ್ಷಗಳ ಕಾಲ ತಪಸ್ಸು ಮಾಡಿ ಸಾಧನೆಗೈದ ವಿಶ್ವ ಶ್ರೇಷ್ಠ ಸಂತ. ಗುರುಗಳು ನೀಡಿದ ಶ್ರೇಷ್ಠ ಸಂದೇಶಗಳನ್ನು ವಿದ್ಯಾರ್ಥಿಗಳು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಉನ್ನತ ಯಶಸ್ಸನ್ನು ಕಾಣಲು ಸಾಧ್ಯ ಎಂದರು.
ಬರ್ಕೆ ಪೊಲೀಸ್ ಸ್ಟೇಷನ್ ಸಬ್ ಇನ್ಸ್ಪೆಕ್ಟರ್ ಗುರುವಪ್ಪ, ಶ್ರೀ ವೆಂಕಟೇಶ ಶಿವ ಭಕ್ತಿ ಯೋಗ ಸಂಘದ ಉಪಾಧ್ಯಕ್ಷ ಡಾ. ಬಿ. ಜಿ. ಸುವರ್ಣ, ಕಾಲೇಜು ಆಡಳಿತಾಧಿಕಾರಿ ನಾಗೇಶ್ ಕರ್ಕೇರ, ಬಿ.ಎಡ್. ವಿಭಾಗದ ಪ್ರಾಂಶುಪಾಲ ಉದಯಕುಮಾರ್ ಬಿ. ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಯತೀನ್ ಉಪಸ್ಥಿತರಿದ್ದರು.
ಕಾಲೇಜಿನ ಸಂಚಾಲಕರಾದ ವಸಂತ್ ಕಾರಂದೂರ್ ಸ್ವಾಗತಿಸಿದರು. ಪಿಯುಸಿ ವಿಭಾಗದ ಪ್ರಾಂಶುಪಾಲ ರಘುರಾಜ್ ಕದ್ರಿ ಬಿ. ವಂದಿಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ಶ್ರುತಿ ಅಮೀನ್ ಕೆ. ಕಾರ್ಯಕ್ರಮ ನಿರೂಪಿಸಿದರು.