ಕಳೆದ ಲೋಕಸಭಾ ಚುನಾವಣೆಯ ಸಂದರ್ಭ ಈ ಭಾಗದ ಜನರು ಸಾಮೂಹಿಕ ಚುನಾವಣಾ ಬಹಿಷ್ಕಾರ ಹಾಕಿ ಬ್ಯಾನರ್ ಅಳವಡಿಸಿ ಈ ಮೂಲಕ ಆಳುವ ವರ್ಗಕ್ಕೆ ಬಿಸಿ ಮುಟ್ಟಿಸಿದ್ದರು. ಆ ಸಂದರ್ಭ ಸ್ಥಳೀಯ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಅಧಿಕಾರಿಗಳು ಸೇರಿದಂತೆ ಚುನಾವಣಾಧಿಕಾರಿಗಳು ಆಗಮಿಸಿ, ರಾಜಕಾರಣಿಗಳಂತೆ ಭರವಸೆ ನೀಡಿ ವಾಪಸ್ ಹೋದವರು ಮತ್ತೆ ಆ ಕಡೆಗೆ ಗಮನ ಹರಿಸಿಲ್ಲ. ಇದೀಗ ಮತ್ತೆ ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗಳು ಸಾಲು ಸಾಲಾಗಿ ಬರಲಿದೆ. ಮತ್ತೊಮ್ಮೆ ಯಾವುದೇ ಕಾರಣಕ್ಕೂ ಜಗ್ಗದ, ಬಗ್ಗದ ರೀತಿಯಲ್ಲಿ ಚುನಾವಣಾ ಬಹಿಷ್ಕಾರಕ್ಕೆ ಈಗಾಗಲೇ ತಯಾರಿ ನಡೆಸಲಾಗಿದೆ. ಅದಕ್ಕಿಂತಲೂ ಮೊದಲು ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಮತ್ತೊಮ್ಮೆ ಮಂಗಳಾರತಿ ಗ್ಯಾರಂಟಿ ಎನ್ನುತ್ತಾರೆ ಇಲ್ಲಿನ ಸಾರ್ವಜನಿಕರು.