ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಸ್ಫೋಟ ಬೆದರಿಕೆ

ಬಾಂಬ್ ಭೀತಿ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯ ಸಮುಚ್ಚಯದ ಹೊರಾಂಗಣದಲ್ಲಿ ಆತಂಕದಿಂದ ಕಾಯುತ್ತಿರುವ ಜನತೆ.
ಬಾಂಬ್ ಭೀತಿ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯ ಸಮುಚ್ಚಯದ ಹೊರಾಂಗಣದಲ್ಲಿ ಆತಂಕದಿಂದ ಕಾಯುತ್ತಿರುವ ಜನತೆ.
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ವಿದ್ಯಾನಗರದಲ್ಲಿ ಚಟುವಟಿಕೆ ನಡೆಸುತ್ತಿರುವ ಜಿಲ್ಲಾ ನ್ಯಾಯಾಲಯ ಸಮುಚ್ಚಯಕ್ಕೆ ಇಮೇಲ್ ಸಂದೇಶದ ಮೂಲಕ ಬಾಂಬ್ ಸ್ಫೋಟದ ಹುಸಿ ಬೆದರಿಕೆ ಹಿನ್ನೆಲೆಯಲ್ಲಿ ತಾಸುಗಳ ಕಾಲ ಆತಂಕದ ವಾತಾವರಣದಲ್ಲಿ ಕಳೆಯಬೇಕಾಗಿ ಬಂತು.

ಗುರುವಾರ ಬೆಳಗ್ಗೆ ನ್ಯಾಯಾಲಯ ಕಲಾಪ ಅರಂಭಗೊಂಡ ಅಲ್ಪ ಹೊತ್ತಿನಲ್ಲಿ ನ್ಯಾಯಾಲಯದ ಔದ್ಯೋಗಿ ವೆಬ್‌ಸೈಟ್‌ಗೆ ಬಾಂಬ್ ಬೆದರಿಕೆಯ ಸಂದೇಶ ಲಭಿಸಿದೆ. ಮಾಹಿತಿ ಲಭಿಸುತ್ತಿದ್ದಂತೆ ವಿದ್ಯಾನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ನ್ಯಾಯಾಲಯದೊಳಗಿದ್ದವರನ್ನು ಹೊರಗೆ ಕಳುಹಿಸಿ, ಶ್ವಾನ, ಬಾಂಬ್ ಸ್ಕ್ವಾಡ್‌ನೊಂದಿಗೆ ತಪಾಸಣೆ ಆರಂಭಿಸಿದ್ದಾರೆ. ನ್ಯಾಯಾಧೀಶರು, ವಕೀಲರು ಹಾಗೂ ಕಕ್ಷಿದಾರರನ್ನು ಹೊರಕ್ಕೆ ಕಳುಹಿಸಿ ತಪಾಸಣೆ ಕಾರ್ಯ ಚುರುಕುಗೊಳಿಸಲಾಗಿತ್ತು. ಈ ಸಂದರ್ಭ ಕೋರ್ಟು ಹಾಲ್ ಜನರಿಂದ ತುಂಬಿಕೊಂಡಿತ್ತು. ತಾಸುಗಳ ಕಾಲ ನಡೆಸಿದ ತಪಾಸಣೆ ನಂತರ ಪ್ರತಿಯೊಬ್ಬನನ್ನೂ ಗರಿಷ್ಠ ತಪಾಸಣೆಯೊಂದಿಗೆ ಒಳಗೆ ಬಿಡಲಾಯಿತು.

ಮಹಮ್ಮದ್ ಅಸ್ಲಾಂ ವಿಕ್ರಂ ತಮಿಳ್ ಲಿಬರೇಶನ್ ಆರ್ಗನೈಸೇಶನ್ ಎಂಬ ವಿಳಾಸದಿಂದ ಮೇಲ್ ಲಭಿಸಿದೆ. ಆರ್‌ಡಿಎಕ್ಸ್ ಬಳಸಿ ನಿರ್ಮಿಸಿದ ಮೂರು ಆರ್‌ಡಿಎಕ್ಸ್- ಎಲ್ ಐಇಡಿಗಳನ್ನು ಗೇಟಿನ ಬಳಿ ಅಳವಡಿಸಲಾಗಿದೆ. ಮಧ್ಯಾಹ್ನ ವೇಳೆಗೆ ಇಬ್ಬರು ಸ್ಥಳಕ್ಕಾಗಮಿಸಲಿದ್ದು, ರಿಮೋಟ್ ಮೂಲಕ ಇದನ್ನು ಸ್ಫೋಟಿಸಲಾಗುವುದು. ಇದು ಸ್ಫೋಟಗೊಳ್ಳದಿದ್ದಲ್ಲಿ ಆ ಇಬ್ಬರೂ ನ್ಯಾಯಾಲಯದೊಳಗೆ ಪ್ರವೇಶಿಸಿ ತಮ್ಮನ್ನು ಸ್ವಯಂ ಸ್ಫೋಟಿಸಿಕೊಳ್ಳಲಿದ್ದಾರೆ. ಇದಕ್ಕೂ ಮೊದಲು ನ್ಯಾಯಾಧೀಶರು, ವಕೀಲರು ಹಾಗೂ ಇತರ ಕಕ್ಷೀದಾರರು ನ್ಯಾಯಾಲಯದಿಂದ ಹೊರಕ್ಕೆ ಧಾವಿಸುವಂತೆ ತಿಳಿಸಲಾಗಿದೆ.

ವಿಕ್ರಂ ಅಂಡರ್‌ಸ್ಕ್ರೋಲ್ ರಾಜಗುರು ಔಟ್‌ಲುಕ್ ಡಾಟ್ ಕಾಮ್ ಎಂಬ ಮೇಲ್‌ನಿಂದ ಈ ಸಂದೇಶ ರವಾನಿಸಲಾಗಿದೆ. ಸಂದೇಶದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಆತಂಕಕ್ಕೀಡಾದ ಜನರು ನ್ಯಾಯಾಲಯದೊಳಗಿಂದ ಧಾವಿಸಿದ್ದಾರೆ. ದೀರ್ಘ ಕಾಲದ ತಪಾಸಣೆ ನಂತರ ಸಂದೇಶ ಹುಸಿ ಎಂಬುದಾಗಿ ಮನದಟ್ಟಾಗಿದ್ದು, ಸ್ಥಳದಲ್ಲಿದ್ದವರು ನಿಟ್ಟುಸಿರು ಬಿಟ್ಟಿದ್ದಾರೆ. ನಂತರ ಬಿಗು ತಪಾಸಣೆ ನಂತರ ಜನರನ್ನು ನ್ಯಾಯಾಲಯದೊಳಗೆ ಕಳುಹಿಸಿಕೊಡಲಾಗಿದೆ. ಇದೇ ಸಂದರ್ಭ ಕೇರಳದ ಇತರ ನ್ಯಾಯಾಲಯಗಳಿಗೂ ಬಾಂಬ್ ಬೆದರಿಕೆ ಕರೆ ಲಭಿಸಿತ್ತು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net