

ಉಳ್ಳಾಲ: ಸೋಮೇಶ್ವರ ಪೆರಿಬೈಲ್ ಬೀಚ್‌ನಲ್ಲಿ ಈಜಲು ತೆರಳಿ ನಾಪತ್ತೆಯಾಗಿದ್ದ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿ, ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಕಮ್ಮರಡಿ ನಿವಾಸಿ ಶೋಭಿತ್ ಎಂ.ಗೌಡ(18) ಶವ ಭಾನುವಾರ ಪತ್ತೆಯಾಗಿದೆ.
ಉಜಿರೆ ಖಾಸಗಿ ಕಾಲೇಜಿನ 9 ವಿದ್ಯಾರ್ಥಿಗಳು ಶನಿವಾರ ಕುತ್ತಾರ್ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ಸಂಜೆ ಸೋಮೇಶ್ವರ ಪೆರಿಬೈಲ್ ಬೀಚ್‌ಗೆ ತೆರಳಿದ್ದರು. ಈ ವೇಳೆ ಶೋಭಿತ್ ಮತ್ತು ಆಕಾಶ್ ಸ್ನಾನಕ್ಕೆಂದು ಸಮುದ್ರಕ್ಕಿಳಿದ ಕೆಲವೇ ಕ್ಷಣಗಳಲ್ಲಿ ಪ್ರಬಲ ಅಲೆಗೆ ಸಿಲುಕಿ ಕೊಚ್ಚಿ ಹೋಗಿದ್ದರು. ಆಕಾಶ್ ಈಜಿ ದಡ ಸೇರಿದ್ದು ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ನಾಪತ್ತೆಯಾಗಿದ್ದರು.
ಎಸ್‌ಡಿಆರ್‌ಎಫ್, ಕರಾವಳಿ ಕಾವಲು ಪಡೆ, ಗೃಹರಕ್ಷಕ ದಳ ಹಾಗೂ ಉಳ್ಳಾಲ ಪೊಲೀಸರು ತಡರಾತ್ರಿವರೆಗೂ ಶೋಧ ಕಾರ್ಯಾಚರಣೆ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ಉಳ್ಳಾಲ ನಾಡದೋಣಿ ಮತ್ತು ಗಿಲ್‌ನೆಟ್ ಮೀನುಗಾರರ ಸಂಘದ ಅಧ್ಯಕ್ಷ ಆಸಿಫ್, ನಿಝಾಮ್ ಕೋಟೆಪುರ, ನಝೀರ್ ಕೋಡಿ, ರಜಾಕ್ ಕೋಟೆಪುರ, ಮುಸ್ತಫಾ ಕೋಟೆಪುರ, ಇರ್ಫಾನ್ ಕೋಟೆಪುರ ಮತ್ತಿತರರು ಭಾನುವಾರ ಬೆಳಗ್ಗೆ 11ರ ಹೊತ್ತಿಗೆ ಕಾರ್ಯಾಚರಣೆ ನಡೆಸಿ ಮಧ್ಯಾಹ್ನ 2ರ ವೇಳೆಗೆ ಉಚ್ಚಿಲ ಅತಿಥಿಗೃಹ ಹಿಂಭಾಗದಲ್ಲಿ ಮೃತದೇಹ ಪತ್ತೆಹಚ್ಚಿ ನಾಡದೋಣಿ ಮೀನುಗಾರರ ಸಂಘದ ಆಂಬುಲೆನ್ಸ್ ಮೂಲಕ ದಡಕ್ಕೆ ತಂದಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.