

ಕಾಸರಗೋಡು: ಮಂಜೇಶ್ವರ ಸಮೀಪದ ಕಳಿಯೂರು ಆಲಂತಾಡಿಯ ವ್ಯಕ್ತಿಯೊಬ್ಬರ ತೋಟದ ಕೆರೆಯಲ್ಲಿ ಪತ್ತೆಯಾದ ಮೃತದೇಹವನ್ನು ಒಡಿಶಾ ನಿವಾಸಿ ಬಿಪಿನ್ ವಾಲಿಕ್ ಎಂದು ಗುರುತಿಸಲಾಗಿದೆ. ನ.13ರಂದು ಸಂಜೆ ಅರಂತಾಡಿ ನಿವಾಸಿಯೊಬ್ಬರ ತೋಟದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿತ್ತು. ಅದನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಬಳಿಕ ಒಡಿಶಾದಿಂದ ಆಗಮಿಸಿದ ಬಿಪಿನ್ ವಾಲಿಕ್ ಅವರ ಸಂಬಂಧಿಕರು ಮೃತದೇಹವನ್ನು ಗುರುತಿಸಿ ಖಚಿತಪಡಿಸಿದ್ದಾರೆ. ಐದು ದಿನಗಳ ಹಿಂದೆ ಸಾವು ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಮಂಜೇಶ್ವರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಸರಗೋಡು: ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ತೂಮಿನಾಡು ಸರಸ್ವತೀನಗರದಲ್ಲಿ ವಕೀಲ ಯೋಗೇಂದ್ರ ಆಚಾರ್ಯ ಎಂಬುವರ ಮನೆಯ ಬೀಗ ಒಡೆದು ನುಗ್ಗಿದ ಕಳ್ಳರು ಒಂದು ಲಕ್ಷ ರೂ. ನಗದು ಹಾಗೂ ಚಿನ್ನದ ಉಂಗುರ ಕಳವುಗೈದಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪತ್ನಿ ಜಲಜಾಕ್ಷಿ ಶನಿವಾರ ಮನೆಗೆ ಬೀಗ ಹಾಕಿ ತಲಪಾಡಿಯಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಭಾನುವಾರ ಮರಳಿದಾಗ ಮನೆಯ ಎದುರಿನ ಬಾಗಿಲು ಒಡೆದಿರುವುದು ಕಂಡುಬಂದಿದೆ. ಒಳಗೆ ಪರಿಶೀಲಿಸಿದಾಗ ಕಪಾಟಿನಲ್ಲಿದ್ದ ಬಟ್ಟೆ-ಬರೆಗಳನ್ನು ಚಲ್ಲಾಪಿಲ್ಲಿ ವಾಡಲಾಗಿದ್ದು, ಚಿನ್ನ ಹಾಗೂ ನಗದು ಕಳವು ಮಾಡಲಾಗಿತ್ತು.
ಕಾಸರಗೋಡು: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಮೀಯಪದವು ತಲೇಕಳ ಮದಂಗಲ್ಲು ಶ್ರೀ ಧೂವಾವತೀ ದೈವಸ್ಥಾನದ ಕಚೇರಿ ಹಾಗೂ ಸ್ಟೋರ್ ರೂಂನ ಬೀಗ ಒಡೆದು ನುಗ್ಗಿದ ಕಳ್ಳರು ತಾಮ್ರದ ಕೊಪ್ಪರಿಗೆಯ ಸಹಿತ ಪಾತ್ರೆಗಳು, ದೀಪಗಳು ಸೇರಿದಂತೆ ಹಲವು ಸಾಮಗ್ರಿಗಳನ್ನು ಕಳವುಗೈದಿದ್ದಾರೆ. ಕಳವಾದ ಸಾಮಗ್ರಿಗಳ ಮೌಲ್ಯ ಎರಡೂವರೆ ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ದೈವಸ್ಥಾನ ಸಮಿತಿ ಅಧ್ಯಕ್ಷ ಕೃಷ್ಣ ಪ್ರಸಾದ್ ಮಂಜೇಶ್ವರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದರು.